×
Ad

ಅಮಿತ್ ಶಾ ಗೆ ಕೇರಳ ಆತಿಥ್ಯ !

Update: 2017-06-03 15:04 IST

ತಿರುವನಂತಪುರಂ,ಜೂ.3 : ಕೇರಳಕ್ಕೆ ಮೂರು ದಿನದ ಪ್ರವಾಸಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶುಕ್ರವಾರ ಕೊಚ್ಚಿಗೆ ಆಗಮಿಸಿದ್ದಾರೆ. ಸಾಮಾಜಿಕ ತಾಣ ಪ್ರಿಯರು ಅವರ ಭೇಟಿಯನ್ನು ಆಚರಿಸುತ್ತಿದ್ದು ಅವರನ್ನು #ಅಲವಲಾದಿಶಾಜಿ ಎಂಬ ಹ್ಯಾಶ್ ಟ್ಯಾಗಿನೊಂದಿಗೆ ಸ್ವಾಗತಿಸಿದ್ದಾರೆ. ದಿವಂಗತ ಮಲಯಾಳಂ ನಾಯಕ ನಟ ಜಯನ್ ಅವರ ಖ್ಯಾತ ಡೈಲಾಗ್ ‘‘ನೀ ಅಲ್ಲೆಡ ಅಲವಲಾದಿಶಾಜಿ?’’ ( ನೀನಲ್ಲವೇ ಒರಟು ಶಾಜಿ) ಯಿಂದ ಪ್ರೇರಣೆ ಪಡೆದ ಈ ಹ್ಯಾಶ್ ಟ್ಯಾಗ್ ವೈರಲ್ ಆಗಿ ಬಿಟ್ಟಿದೆ. ಈ ಹಿಂದೆ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ್ದ ಪ್ರಧಾನಿ ಮೋದಿಗೆ #ಪೊಮೋನೆಮೋದಿ ಎಂದು ಟ್ವಿಟ್ಟರಿಗರು ಹೀಗಳೆದಿದ್ದರು. ಅಂತೆಯೇ ಇದೀಗ ‘ಅಲವಲಾದಿಶಾಜಿ’ ಮೂಲಕ ಅವರು ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.

ಇದಕ್ಕೆಲ್ಲಾ ಕಾರಣ ಕೇಂದ್ರದ ಗೋಹತ್ಯಾ ನಿಷೇಧ ನಿಯಮ. ಹಲವಾರು ಹಾಸ್ಯಚಟಾಕಿಗಳ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಕೇರಳಿಗರು ಕೇಂದ್ರದ ನೀತಿಯ ವಿರುದ್ಧ ಕೆಂಡ ಕಾರುತ್ತಿದ್ದಾರೆ. ‘‘ಮಲಯಾಳಿಗಳಿಗೆ ಬೀಫ್ ತಿನ್ನಲು ಅನುಮತಿಸದ ಅಲವಲಾದಿಶಾಜಿ ನೀವಲ್ಲವೇ?’’ ಎಂದು ಟ್ವಿಟ್ಟರಿಗರು ಹಲವು ಹಾಸ್ಯಚಟಾಕಿಗಳ ಮೂಲಕ ಶಾ ರನ್ನು ಪ್ರಶ್ನಿಸುತ್ತಿದ್ದಾರೆ.

‘‘ಅಮಿತ್ ಶಾ ಜಿ ನೀವು ಕೇರಳದಲ್ಲಿರುವಾಗ ಪರೋಟ ಮತ್ತು ಬೀಫ್ ಟ್ರೈ ಮಾಡಿ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನು ಹಲವರು ಅಮಿತ್ ಶಾ ಗೆ ಒಮ್ಮೆಯಾದರೂ ಬೀಫ್ ಫ್ರೈ ರುಚಿ ನೋಡುವಂತೆ ಹೇಳಿದ್ದಾರೆ.

ಇತ್ತೀಚೆಗೆ ಹಳೆಯ ಫೋಟೋ ಒಂದನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ ಅದು ಕೇರಳದಲ್ಲಿನ ಗೋ ಹತ್ಯೆಯ ಫೋಟೋ ಎಂಬಂತೆ ಟ್ವೀಟ್ ಮಾಡಿದ್ದ ಕೇರಳ ಬಿಜೆಪಿ ನಾಯಕ ಕೆ.ಸುರೇಂದ್ರನ್ ‘‘ಮತ್ತೆ ಸುಳ್ಳುಗಳನ್ನು ಹೇಳಲು ಬಾಯಿ ತೆರೆಯದಂತೆ ಮಾಡಲು’’ ಅವರನ್ನು ದಿಲ್ಲಿಗೆ ಕರೆಸಬೇಕೆಂದೂ ಹಲವರು ಹೇಳಿದ್ದಾರೆ.

ಆದರೆ ಅಮಿತ್ ಶಾ ಅವರ ಲೇಟೆಸ್ಟ್ ಟ್ವೀಟ್ ಪ್ರಕಾರ ಕೇರಳಿಗರು ಅವರಿಗೆ ಹಾರ್ದಿಕ ಸ್ವಾಗತ ನೀಡಿದ್ದಾರೆ. ‘‘ಕೇರಳದಲ್ಲಿ ಬಿಜೆಪಿ ಪರವಾಗಿ ಜನರಲ್ಲಿರುವ ಉತ್ಸಾಹ ಅವರು ಬಿಜೆಪಿ ಮೇಲಿರಿಸಿರುವ ನಂಬಿಕೆಯ ಸಂಕೇತವಾಗಿದೆ ಹಾಗೂ ಅವರು ಎಲ್‌ಡಿಎಫ್, ಯುಡಿಎಫ್ ಗಳಿಗಿಂತ ಭಿನ್ನ ಸರಕಾರವನ್ನು ಬಯಸುತ್ತಿದ್ದಾರೆಂದು ಸೂಚಿಸುತ್ತದೆ,’’ ಎಂದು ಅಮಿತ್ ಶಾ ಅವರ ಟ್ವೀಟ್ ಹೇಳಿದೆ. ಪ್ರಾಯಶಃ ಶಾಗೆ ಯಾರು ಕೂಡ ಕೇರಳಿಗರ ಈ ಸ್ವಾಗತ ಸಂದೇಶಗಳ ಅರ್ಥವನ್ನು ವಿವರಿಸಿಲ್ಲ !!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News