×
Ad

ಭನ್ವಾರಿ ದೇವಿ ಕೊಲೆ ಪ್ರಕರಣ:ಐದೂವರೆ ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ಇಂದಿರಾ ಸೆರೆ

Update: 2017-06-03 15:37 IST
ಭನ್ವಾರಿ ದೇವಿ

ಜೈಪುರ,ಜೂ.3: ರಾಜಸ್ಥಾನದ ಆಗಿನ ಅಶೋಕ್ ಗೆಹ್ಲೋಟ್ ಸರಕಾರವನ್ನು ತಲ್ಲಣಗೊಳಿಸಿದ್ದ ಕುಖ್ಯಾತ ಭನ್ವಾರಿ ದೇವಿ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಇಂದಿರಾ ಬಿಷ್ಣೋಯಿಯನ್ನು ಕೊನೆಗೂ ನೆರೆಯ ಮಧ್ಯಪ್ರದೇಶದಲ್ಲಿ ಬಂಧಿಸುವಲ್ಲಿ ರಾಜಸ್ಥಾನ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ವು ಯಶಸ್ವಿಯಾಗಿದೆ.

ತನ್ನ ತಲೆಯ ಮೇಲೆ ಐದು ಲಕ್ಷ ರೂ.ಬಹುಮಾನವನ್ನು ಹೊತ್ತಿದ್ದ ಇಂದಿರಾಳನ್ನು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ನೇಮವಾರ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ದೇವಾಸ್‌ನ ಹೆಚ್ಚುವರಿ ಎಸ್‌ಪಿ ಅನಿಲ್ ಪಾಟಿದಾರ್ ತಿಳಿಸಿದರು.

ವೃತ್ತಿಯಲ್ಲಿ ನರ್ಸ್ ಆಗಿದ್ದ ಭನ್ವಾರಿಯನ್ನು 2011,ಸೆ.1ರಂದು ಜೋಧಪುರದ ಬಿಲಾರಾ ಪ್ರದೇಶದಿಂದ ಅಪಹರಿಸಿ,ಬಳಿಕ ಕೊಲೆ ಮಾಡಲಾಗಿತ್ತು. 2012,ಜನವರಿಯಲ್ಲಿ ಜೋಧಪುರ ಬಳಿಯ ಜಲೋದಾ ಗ್ರಾಮದಲ್ಲಿ ಶವದ ಅವಶೇಷಗಳು ಪತ್ತೆಯಾಗಿದ್ದವು.

ಭಾರೀ ಸಂಚಲನ ಮೂಡಿಸಿದ್ದ ಈ ಕೊಲೆ ಪ್ರಕರಣ ರಾಜಸ್ಥಾನದ ಆಗಿನ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರದ ಬುಡವನ್ನೇ ಅಲುಗಾಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ದಂತೆ ಮಾಜಿ ಸಚಿವ ಮಹಿಪಾಲ ಸಿಂಗ್ ಮಡೆರ್ನಾ ಮತ್ತು ಇಂದಿರಾಳ ಸೋದರ ಮಲ್ಖನ್ ಸಿಂಗ್ ಸೇರಿದಂತೆ 16 ಜನರು ಬಂಧನದಲ್ಲಿದ್ದಾರೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.

ಇಂದಿರಾಳ ಸೂಚನೆಯಂತೆ ಭನ್ವಾರಿ ಆಗ ರಾಜಸ್ಥಾನದ ಜಲ ಸಂಪನ್ಮೂಲ ಸಚಿವ ರಾಗಿದ್ದ ಮಡೆರ್ನಾ ಜೊತೆ ತನ್ನ ಲೈಂಗಿಕ ಕ್ರಿಯೆಯನ್ನು ವೀಡಿಯೋ ಮಾಡಿದ್ದಳು ಎಂದು ಜೋಧಪುರ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ಸಿಬಿಐ ಹೇಳಿದೆ.

ತನ್ನ ಸೋದರ ಮಲ್ಖನ್‌ನನ್ನು ಸಚಿವನಾಗಿಸಲು ತಂತ್ರ ಹೂಡಿದ್ದ ಇಂದಿರಾ ಈ ವೀಡಿಯೊವನ್ನು ಬಳಸಿ ಮಡೆರ್ನಾ ತಲೆಗೆ ಕಳಂಕ ಕಟ್ಟಲು ಬಯಸಿದ್ದಳು. ಆದರೆ ಭನ್ವಾರಿ ಸಿಡಿಯನ್ನು ಇಂದಿರಾಗೆ ಒಪ್ಪಿಸುವ ಬದಲು ತಾನೇ ಮಡೆರ್ನಾಗೆ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಳು. ಭನ್ವಾರಿಯ ಮನೆಯಿಂದ ಈ ಸಿಡಿಯನ್ನು ಕದ್ದಿದ್ದ ಮಲ್ಖನ್ ಅದರ ಪ್ರತಿಗಳನ್ನು ಪತ್ರಕರ್ತರಿಗೆ ಹಂಚಿದ್ದ.

ಮಲ್ಖನ್ ಭನ್ವಾರಿ ಜೊತೆಗೆ ಅನೈತಿಕ ಸಂಬಂಧ ಹೊಂದಿದು,್ದ ಆಕೆಯ ಕಿರಿಯ ಮಗುವಿನ ತಂದೆಯೂ ಆಗಿದ್ದ ಮತ್ತು ಭನ್ವಾರಿ ಹಣಕ್ಕಾಗಿ ಆತನನ್ನು ನಿರಂತರವಾಗಿ ಪೀಡಿಸುತ್ತಿದ್ದಳು ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ಉ್ಲಲೇಖಿಸಿದೆ. ಮಡೆರ್ನಾ ಕೂಡ ತನ್ನ ಸಚಿವ ಹುದ್ದೆಗೆ ಕುತ್ತು ಬಂದಿದ್ದರಿಂದ ಭನ್ವಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ಧರಾಗಿದ್ದರು. ಹೀಗಾಗಿ ಉಭಯ ರಾಜಕೀಯ ಶತ್ರುಗಳು ಒಂದಾಗಿ ಬಾಡಿಗೆ ಹಂತಕರ ಮೂಲಕ ಭನ್ವಾರಿಯ ಕಥೆ ಮುಗಿಸಿದ್ದರು. ಇಂದಿರಾಳನ್ನು ಸಿಬಿಐ ಈ ಹಿಂದೆ ವಿಚಾರಣೆ ಗೊಳಪಡಿಸಿತ್ತು. ಅದರ ಬೆನ್ನಿಗೇ ಆಕೆ ಮಾಯವಾಗಿದ್ದಳು.

ಇಂದಿರಾ ಕಳೆದ ಐದೂವರೆ ವರ್ಷಗಳಿಂದ ಬಿಷ್ಣೋಯಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ನೇಮವಾರ್‌ನಲ್ಲಿ ತನ್ನ ನಿಕಟ ಸಹಾಯಕಿ ಜೊತೆ ಸಾಮಾನ್ಯ ಮಹಿಳೆ ಯಂತೆ ವಾಸವಿದ್ದಳು. ತನ್ನ ಇರುವನ್ನು ಮರೆಮಾಚಲು ಆಕೆ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ ಮತ್ತು ಎಟಿಎಂ ಕಾರ್ಡ್‌ನ್ನೂ ಹೊಂದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News