ಸಚಿವರ ಎಂಆರ್‌ಐ ಸ್ಕ್ಯಾನಿಂಗ್ ಸಂದರ್ಭ ಯಂತ್ರದೊಳಗೆ ಸಿಲುಕಿಕೊಂಡ ಗನ್...!

Update: 2017-06-03 14:37 GMT

ಲಕ್ನೊ, ಜೂ.3: ಸಚಿವರೋರ್ವರನ್ನು ಎಂಆರ್‌ಐ ಸ್ಕಾನಿಂಗ್ ನಡೆಸುವ ಸಂದರ್ಭ ಅವರ ಅಂಗರಕ್ಷಕ ಹೊಂದಿದ್ದ ಬಂದೂಕನ್ನು ಯಂತ್ರ ಸೆಳೆದುಕೊಂಡು, ಬಂದೂಕು ಯಂತ್ರದ ಒಳಗೆ ಸಿಕ್ಕಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೊದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಇದೀಗ ಕೋಟಿಗಟ್ಟಲೆ ಬೆಲೆಬಾಳುವ ಎಂಆರ್‌ಐ ಸ್ಕಾನಿಂಗ್ ಯಂತ್ರ ನಿರುಪಯೋಗಿಯಾಗಿದ್ದು ಇದರ ದುರಸ್ತಿಗೆ ಎರಡು ವಾರ ಬೇಕಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

  ಉ.ಪ್ರದೇಶದ ಸಚಿವ ಸತ್ಯದೇವ್ ಪಚೌರಿ ಶುಕ್ರವಾರ ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಲಕ್ನೊದ ಸರಕಾರಿ ಆಸ್ಪತೆಗೆ ಕರೆತರಲಾಗಿತ್ತು. ಇವರಿಗೆ ಎಂಆರ್‌ಐ ಸ್ಕಾನ್‌ನ ಅಗತ್ಯವಿದೆ ಎಂದು ವೈದ್ಯರು ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಸಚಿವರನ್ನು ಎಂಆರ್‌ಐ ಸ್ಕಾನಿಂಗ್ ರೂಂಗೆ ಕರೆದೊಯ್ಯಲಾಗಿದೆ.

ಈ ಸಂದರ್ಭ ಸಚಿವರ ಗನ್‌ಮ್ಯಾನ್ (ಭದ್ರತಾ ಸಿಬ್ಬಂದಿ) ಸಹ ರೂಮಿನೊಳಗೆ ತೆರಳಿದ್ದಾನೆ. ಆಗ ಆತನ ಕೈಯಲ್ಲಿದ್ದ ಬಂದೂಕವನ್ನು ಸ್ಕಾನಿಂಗ್ ಯಂತ್ರ ಸೆಳೆದುಕೊಂಡಿದ್ದು (ಯಂತ್ರದೊಳಗಿರುವ ಅಯಸ್ಕಾಂತ) ಬಂದೂಕು ಯಂತ್ರದೊಳಗೆ ಸಿಲುಕಿಕೊಂಡಿದೆ. ಇದೀಗ ಈ ಯಂತ್ರವನ್ನು ದುರಸ್ತಿ ಮಾಡಲು 15 ದಿನ ಬೇಕಾಗಬಹುದು ಮತ್ತು 15 ಲಕ್ಷ ವೆಚ್ಚ ತಗಲುತ್ತದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪ್ರಕಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

 ಜನರು ನಿರ್ಬಂಧಿತ ಪ್ರದೇಶದೊಳಗೆ ಅನುಮತಿ ಪಡೆಯದೆ ಪ್ರವೇಶಿಸಬಾರದು ಎಂದು ಆಸ್ಪತ್ರೆಯಲ್ಲಿ ಅಲ್ಲಲ್ಲಿ ಸೂಚನಾ ಬರಹ ಹಾಕಲಾಗಿದೆ. ಆದರೂ ಭದ್ರತಾ ಸಿಬ್ಬಂದಿ ಕೋಣೆಯೊಳಗೆ ಹೇಗೆ ಹೋದ ಎಂದು ತಿಳಿದಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುಬ್ರತ್ ಚಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News