ಬಂಧನ-ಬಿಡುಗಡೆಯ ಕತೆ 'ಡಿಯರ್ ಮಾಯಾ'

Update: 2017-06-04 07:37 GMT

ಆಕೆ ನಲವತ್ತರ ಹರೆಯದ ಮಾಯಾದೇವಿ. ಶಿಮ್ಲಾದಲ್ಲಿ ವಾಸಿಸುತ್ತಿರುವ ರಾಜಮನೆತನದ ಹೆಣ್ಣುಮಗಳು. ಕುಟುಂಬದವರ ಆಸ್ತಿ ಚಿತಾವಣೆಯಿಂದಾಗಿ ಯಾವ ಸಂಬಂಧಗಳೂ ಕೈಗೂಡದೆ ಅವಿವಾಹಿತೆಯಾಗಿಯೇ ಉಳಿಯುವಂತಾಗುತ್ತದೆ. ಈ ನೋವು, ವಿಷಾದದಿಂದಾಗಿ ಆಕೆ ಇಪ್ಪತ್ತು ವರ್ಷಗಳಿಂದ ತನ್ನ ಬಂಗಲೆಯನ್ನು ಬಿಟ್ಟು ಹೊರಗೆ ಬಂದಿಲ್ಲ. ಈ ಬಂಗಲೆಯ ಪಕ್ಕದಲ್ಲೇ ಹದಿನಾಲ್ಕರ ಹರೆಯದ ಶಾಲೆಗೆ ಹೋಗುವ ಆನ್ನಾ ಇದ್ದಾಳೆ. ಆಕೆಗೊಬ್ಬಳು ತುಂಟ ಸ್ನೇಹಿತೆ ಇರಾ. ಎರಡು ದಶಕಗಳಿಂದ ಕತ್ತಲೆಯಲ್ಲೇ ಬದುಕುತ್ತಿರುವ ಮಾಯಾದೇವಿ ಬಗ್ಗೆ ಇವರಿಗೆ ಕುತೂಹಲ. ಇಪ್ಪತ್ತು ವರ್ಷದ ಹಿಂದೆ ಮದುವೆ ಪ್ರಸ್ತಾಪ ಹೊತ್ತು ಮಾಯಾಳನ್ನು ನೋಡಲು ಬಂದ ಪುರುಷನೊಬ್ಬನ ಹೆಸರಿನಲ್ಲಿ ಇವರಿಬ್ಬರೂ ಮಾಯಾ ವಿಳಾಸಕ್ಕೆ ಪತ್ರ ಬರೆಯತೊಡಗುತ್ತಾರೆ! ಈ ಪತ್ರಗಳು ಮಾಯಾ ಮಾತ್ರವಲ್ಲದೆ ಆನ್ನಾ ಮತ್ತು ಇರಾ ಬದುಕಿಗೂ ತಿರುವಾಗುತ್ತವೆ. ಈ ಹಂತದಲ್ಲಿನ ಬದುಕಿನಾಟವೇ ಚಿತ್ರದ ಕಥಾವಸ್ತು.

ಸುನೈನಾ ಭಟ್ನಾಕರ್ ನಿರ್ದೇಶನದ ಈ ಸಿನೆಮಾ ಕಥಾವಸ್ತುವಿನ ಕಾರಣಕ್ಕೆ ಭಿನ್ನವಾಗಿ ನಿಲ್ಲುತ್ತದೆ. ಹುಡುಗಿಯರ ತುಂಟತನ ಮತ್ತು ಮಧ್ಯವಯಸ್ಕ ಮಹಿಳೆಯೊಬ್ಬಳ ಬದುಕನ್ನು ಬೆಸೆದು ಕತೆ ಹೆಣೆದಿರುವ ಸುನೈನಾ ನಿರೂಪಣೆಯಲ್ಲಿಯೂ ಗಮನ ಸೆಳೆಯುತ್ತಾರೆ. ಮೊದಲಾರ್ಧ ಕೊಂಚ ನಿಧಾನಗತಿಯಲ್ಲಿ ಸಾಗುವ ಸಿನೆಮಾ ಮಧ್ಯಾಂತರದ ನಂತರ ವೇಗ ಪಡೆದುಕೊಳ್ಳುತ್ತದೆ. ಪ್ರೇಮಪತ್ರಗಳಿಂದ ಬದಲಾಗುವ ಮಾಯಾ ತನ್ನ ಮನೆಯಲ್ಲಿ ಬಂಧನದಲ್ಲಿರುವ ಪಕ್ಷಿಗಳನ್ನು ಆಗಸಕ್ಕೆ ಹಾರಿಸುತ್ತಾಳೆ. ಆಕೆ ಹೊರಜಗತ್ತು ಪ್ರವೇಶಿಸುವ ಖುಷಿಯಿದು. ಮತ್ತೊಂದೆಡೆ ಈ ಪಕ್ಷಿಗಳನ್ನು ನೋಡುತ್ತಾ ಆನ್ನಾ ಖಿನ್ನಳಾಗುತ್ತಾಳೆ. ಮಾಯಾಳ ತಣ್ಣಗಿನ ಬದುಕಿನಲ್ಲಿ ಅಲೆ ಎಬ್ಬಿಸಿದ ಅಪರಾಧಿ ಮನೋಭಾವ ಆಕೆಯದ್ದು! ಇಂತಹ ಸೂಕ್ಷ್ಮಸನ್ನಿವೇಶಗಳೊಂದಿಗೆ ನಿರೂಪಣೆಯಲ್ಲಿ ಬಿಗಿ ಕಾಯ್ದುಕೊಂಡಿದ್ದಾರೆ ನಿರ್ದೇಶಕಿ ಸುನೈನಾ.

ಅನುಪಮ್ ರಾಯ್ ಅವರ ಹಿನ್ನೆಲೆ ಸಂಗೀತ ಸೊಗಸಾಗಿದೆ. ಛಾಯಾಗ್ರಾಹಕ ಸಯಾಕ್ ಭಟ್ಟಾಚಾರ್ಯ ಶಿಮ್ಲಾದ ಸೌಂದರ್ಯವನ್ನು ಅಂದವಾಗಿ ತೋರಿಸುವಷ್ಟೇ ಸಲೀಸಾಗಿ ನಟಿಯರ ಮುಖಭಾವಗಳ ನೆರಳು-ಬೆಳಕನ್ನೂ ಸೆರೆಹಿಡಿದಿದ್ದಾರೆ. ಮಾಯಾದೇವಿ ಪಾತ್ರ ಮನೀಶಾ ಕೊಯಿರಾಲಾ ಅವರಿಗೆಂದೇ ಸೃಷ್ಟಿಯಾದಂತಿದೆ. ತಮ್ಮ ವಯಸ್ಸಿಗೆ ಸರಿಯಾಗಿ ಹೊಂದುವ ಪಾತ್ರವನ್ನು ಅವರು ಚೆನ್ನಾಗಿ ಪೋಷಿಸಿದ್ದಾರೆ. ಪಾತ್ರಗಳ ಔಚಿತ್ಯವನ್ನು ಅರಿತು ಅಭಿನಯಿಸಿರುವ ಯುವನಟಿಯರಾದ ಮಧಿಹಾ ಇಮಾಮ್ ಮತ್ತು ಶ್ರೇಯಾ ಚೌಧರಿ ಅವರಿಗೆ ಉತ್ತಮ ಭವಿಷ್ಯವಿದೆ. ಲವ್‌ಸ್ಟೋರಿ, ಸಸ್ಪೆನ್ಸ್-ಥ್ರಿಲ್ಲರ್‌ಗಳ ನಡುವೆ ಇದೊಂದು ಅಪರೂಪದ ಸಿನೆಮಾ.

ನಿರ್ದೇಶನ: ಸುನೈನಾ ಭಟ್ನಾಕರ್, ನಿರ್ಮಾಣ: ಸಂದೀಪ್ ಲೆಜೆಲ್, ಸಂಗೀತ : ಅನುಪಮ್ ರಾಯ್, ಛಾಯಾಗ್ರಾಹಕ : ಸಯಾಕ್ ಭಟ್ಟಾಚಾರ್ಯ, ತಾರಾಗಣ: ಮನೀಶಾ ಕೊಯಿರಾಲಾ, ಮಧಿಹಾ ಇಮಾಮ್, ಶ್ರೇಯಾ ಚೌಧರಿ ಮತ್ತಿತರರು.

ರೇಟಿಂಗ್ - ***

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News