ಸೋಲೇ ಗೆಲುವಿನ ಸೋಪಾನ: ಆಮಿರ್ ಖಾನ್
ಕಳೆದ ಒಂದು ದಶಕದಿಂದಲೂ ದೀರ್ಘಕಾಲದಿಂದ ಸೂಪರ್‌ಸ್ಟಾರ್ ಆಮಿರ್‌ಖಾನ್ ಬಾಕ್ಸ್ ಆಫೀಸ್ ಹಿಟ್ಸ್ ನಿಯಮಾವಳಿಗಳನ್ನು ಪುನರ್ ವ್ಯಾಖ್ಯಾನ ಮಾಡುತ್ತಿದ್ದಾರೆ. ಯೋಜನಾಬದ್ಧ ವೃತ್ತಿನಡೆಗಳಿಂದಾಗಿ ಮಿಸ್ಟರ್ ಪರ್ಪೆಕ್ಷನಿಸ್ಟ್ ಎಂದೇ ಹೊಗಳಿಸಿಕೊಂಡ ಮೇರು ನಟ. ಈ ಅಭೂತಪೂರ್ವ ಯಶಸ್ಸಿನ ಗುಟ್ಟು, ಆರಂಭಿಕ ವೈಫಲ್ಯಗಳು ಎಂದು ಅವರು ಬಣ್ಣಿಸುತ್ತಾರೆ. ಆದರೆ ಈ ಕಲಿಕೆ ಅವಧಿಯುದ್ದಕ್ಕೂ ತಮ್ಮ ಸೃಜನಶೀಲ ಪಾಲ್ಗೊಳ್ಳುವಿಕೆ ಮಾತ್ರ ಒಂದೇ ಸಮನಾಗಿತ್ತು ಎಂದು ಹೇಳುತ್ತಾರೆ.
2000ನೆ ಇಸ್ವಿಯ ತಮ್ಮ ‘ಮೇಳಾ ಡೇಸ್’ನಿಂದೀಚೆಗೆ 52 ವರ್ಷದ ಈ ಮೇರು ನಟ ವಿಫಲವಾದದ್ದೇ ಇಲ್ಲ; ಅವರ ಮಂಗಲಪಾಂಡೆ ಚಿತ್ರ ಮಾತ್ರ ಅದ್ಭುತ ಯಶಸ್ಸು ಕಾಣದಿದ್ದರೂ, ಖರ್ಚು ಭರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ‘ಲಗಾನ್’, ‘ದಿಲ್ ಚಹ್ತಾ ಹೈ’, ‘ರಂಗ್ ದೇ ಬಸಂತಿ’, ‘ತಾರೆ ಝಮೀನ್ ಪರ್’, ‘ಘಜಿನಿ’, ‘3 ಈಡಿಯೆಟ್ಸ್’, ‘ಧೂಮ್ 3’, ‘ಪಿಕೆ’ ಹಾಗೂ ‘ದಂಗಲ್’ ಹೀಗೆ ಅವರ ಹಿಟ್ ಚಿತ್ರಗಳ ಪಟ್ಟಿ ಮುಂದುವರಿಯುತ್ತದೆ. ‘‘ಕಳೆದ 27 ವರ್ಷದಿಂದ ನಾನು ನಟನೆ ರಂಗದಲ್ಲಿದ್ದೇನೆ. ನಟನಾ ವೃತ್ತಿಯ ಆರಂಭಿಕ ದಿನಗಳಲ್ಲಿ ನಾನು ಅನುಭವಗಳಿಂದ ಸಾಕಷ್ಟು ಕಲಿತಿದ್ದೇನೆ. ಆದರೆ ಪಾತ್ರಕ್ಕೆ ನಾನು ಹಾಕುತ್ತಿದ್ದ ಪರಿಶ್ರಮ ಅಂದೂ- ಇಂದೂ ಒಂದೇ ಆಗಿದೆ. ಆದರೆ ನಾನು ತಪ್ಪು ಮಾಡುತ್ತಿದ್ದೆ. ಆದ್ದರಿಂದ ನಾನು ಇಂದು ಹೀಗಿರಬೇಕಾದರೆ, ಅದು ನನ್ನ ಇಂದಿನ ಯಶಸ್ಸಿನ ಪರಿಣಾಮ ಅಲ್ಲ. ನನ್ನ ವೈಫಲ್ಯಗಳೂ ಇದಕ್ಕೆ ಕಾರಣ. ಅದು ನನಗೆ ಸಾಕಷ್ಟು ಪಾಠ ಕಲಿಸಿದೆ. ಆದ್ದರಿಂದ ನಾನು ಎಣಿಸಿದಂತೆ ನನ್ನ ವೃತ್ತಿಯನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು’’ ಎಂದು ಪಿಟಿಐಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಆಮಿರ್ ಹೇಳಿಕೊಂಡಿದ್ದಾರೆ. ಜೂನ್ 5ರಿಂದ ಆರಂಭವಾಗುವ ‘ಟಗ್ಸ್ ಆಫ್ ಹಿಂದೂಸ್ಥಾನ್’ ಚಿತ್ರದ ಚಿತ್ರೀಕರಣಕ್ಕಾಗಿ ಅವರು ಪ್ರಸ್ತುತ ಮಾಲ್ಟಾದಲ್ಲಿದ್ದಾರೆ.
ಆಮಿರ್ ಈಗ ಯಶ್‌ರಾಜ್ ಪ್ರಾಜೆಕ್ಟ್‌ಗಾಗಿ ನಿರ್ದೇಶಕ ವಿಜಯ ಕೃಷ್ಣ ಆಚಾರ್ಯ ಮತ್ತು ಸಹ ನಟಿ ಕತ್ರಿನಾ ಕೈಫ್ ಜತೆಗೂಡಿದ್ದಾರೆ. ದಂಗಲ್ ಸಹನಟಿ ಫಾತಿಮಾ ಸನಾ ಶೇಖ್ ಕೂಡಾ ಆಮಿರ್ ಬಳಗದಲ್ಲಿದ್ದಾರೆ. ಆದರೆ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಜತೆಗೆ ಮೊದಲ ಬಾರಿಗೆ ಕಾರ್ಯನಿರ್ವಹಿಸುತ್ತಿರುವುದು ಜೀವನದ ಅದ್ಭುತ ಕ್ಷಣ ಎಂದು ಅವರು ಹೇಳುತ್ತಾರೆ. ಇದು ಅದ್ಭುತ ಚಿತ್ರಕಥೆ; ಎಲ್ಲಕ್ಕಿಂತ ಹೆಚ್ಚಾಗಿ ಅಮಿತಾಭ್ ಬಚ್ಚನ್ ಜತೆ ನಟಿಸುವ ಅವಕಾಶ ಮೊತ್ತಮೊದಲ ಬಾರಿಗೆ ಸಿಕ್ಕಿದೆ. ನಾನು ಅವರ ದೊಡ್ಡ ಅಭಿಮಾನಿ. ಅವರ ಜತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಜೀವನದ ಅಪೂರ್ವ ಕ್ಷಣ.
ಭಾರತದ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡ ದಂಗಲ್ ಚಿತ್ರ ಈಗ ಚೀನಾದಲ್ಲೂ ಅದ್ಭುತವಾಗಿ ಓಡುತ್ತಿದೆ. ಈ ನಟ ಚೀನಾದಲ್ಲಿ ಅತ್ಯಂತ ಜನಪ್ರಿಯ ಭಾರತೀಯ ನಟ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಮೇ 5ರಂದು ಬಿಡುಗಡೆಯಾಗಿ ಅಲ್ಪ ಅವಧಿಯಲ್ಲೇ 1000 ಕೋಟಿ ರೂ.ಗಳಿಕೆ ದಾಖಲೆಯನ್ನು ಮುರಿದ ಬಗ್ಗೆ ಅವರಿಗೇ ಅಚ್ಚರಿಯಾಗಿದೆ. ಅಲ್ಲಿನ ಜನರ ಜತೆಗೆ ಹೇಗೆ ಅಷ್ಟೊಂದು ಗಾಢ ಬಂಧವನ್ನು ಸ್ಥಾಪಿಸುವುದು ಸಾಧ್ಯವಾ ಯಿತು ಎನ್ನುವುದನ್ನು ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆಮಿರ್ ಹೇಳುತ್ತಾರೆ. ಚೀನಾದ ಬಾಕ್ಸ್ ಆಫೀಸ್‌ನಲ್ಲಿ 3 ಈಡಿಯೆಟ್ಸ್ ಉತ್ತಮವಾಗಿ ಓಡಿದ್ದು, ಅವರಿಗೆ ಚೀನಾದಲ್ಲೂ ಉತ್ತಮ ಪ್ರೇಕ್ಷಕವರ್ಗ ಇದೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿತ್ತು.
‘‘ಒಬ್ಬ ನಟ ಪ್ರೇಕ್ಷಕರ ಜತೆ ಹೇಗೆ ಸಂಬಂಧ ಬೆಸೆಯುತ್ತಾನೆ ಎನ್ನುವುದು ತರ್ಕಕ್ಕೆ ನಿಲುಕದ ಅಂಶ. ಅದು ತೀರಾ ಅದೃಶ್ಯ ಅಂಶ. ಅದನ್ನು ಗುರುತಿಸಲಾಗದು. ಅದರೆ ನನ್ನ ಚಿತ್ರಗಳು ಮತ್ತು ಒಳ್ಳೆಯ ಕೆಲಸಗಳು ನನ್ನನ್ನು ಭಾರತದ ಹಾಗೂ ವಿಶ್ವದ ಇತರ ದೇಶಗಳ ಪ್ರೇಕ್ಷಕರ ಜತೆ ಸಂಬಂಧ ಬೆಸೆಯುತ್ತಿದೆ ಎನ್ನುವುದು ನನ್ನ ನಂಬಿಕೆ.’’
ಚೀನಾದಲ್ಲಿ ದೇಶೀಯವಾಗಿ ಬೆಳೆದ ಯಶಸ್ವಿ ಚಿತ್ರೋದ್ಯಮ ಇದೆ. ಜಾಗತಿಕ ಮನರಂಜನಾ ಮಾರುಕಟ್ಟೆಯಲ್ಲಿ ಪ್ರಭಾವಿ ಪಾತ್ರವನ್ನು ಇದು ನಿರ್ವಹಿಸುತ್ತಿದೆ. ಹಾಲಿವುಡ್ ಕೂಡಾ ಚೀನಾವನ್ನು ಓಲೈಸುವ ಪ್ರಯತ್ನದಲ್ಲಿದೆ. ಆದರೆ ಚಿತ್ರ ಬಿಡುಗಡೆ ಮತ್ತು ಸಹಭಾಗಿತ್ವದ ಮೂಲಕ ಭಾರತೀಯ ಚಿತ್ರರಂಗ ಈಗ ತಾನೇ ಎಚ್ಚೆತ್ತುಕೊಂಡು ಅಲ್ಲಿನ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದೆ ಎನ್ನುವುದು ಅವರ ಅಭಿಮತ.
‘‘ಮನರಂಜನಾ ಉದ್ಯಮವನ್ನು ಹೇಗೆ ಮುಂದಕ್ಕೆ ಒಯ್ಯಬಹುದು ಎನ್ನುವ ಮಾರ್ಗವನ್ನು ಚೀನಾ ತೋರಿಸಿಕೊಟ್ಟಿದೆ ಎಂದು ಚಿತ್ರ ನಿರ್ಮಾಪಕ-ನಿರ್ದೇಶಕನಾಗಿ ಆಮಿರ್ ನಂಬುತ್ತಾರೆ. ಭಾರತ ಸರಕಾರ ಕೂಡಾ ಜನಪ್ರಿಯ ಕಲೆ ಮತ್ತು ಸಂಸ್ಕೃತಿಯನ್ನು ಹೀಗೆ ಮುನ್ನಡೆಸಬೇಕು ಎನ್ನುವುದು ಅವರ ಆಶಯ. ಚೀನಾ ಸರಕಾರ ಸ್ಥಳೀಯ ಸಿನೆಮಾವನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುತ್ತಿದೆ. ಚೀನಾದಲ್ಲಿ ಸುಮಾರು 45 ಸಾವಿರ ಚಿತ್ರಮಂದಿರಗಳಿವೆ. ಆದರೆ ಭಾರತದಲ್ಲಿ ಎಲ್ಲ ಭಾಷೆಗಳೂ ಸೇರಿ ಕೇವಲ 8,000 ಚಿತ್ರಮಂದಿರಗಳಿವೆ. ಆದ್ದರಿಂದ ಚೀನಾದಿಂದ ನಾವು ಕಲಿಯಬೇಕಾದ್ದು ಸಾಕಷ್ಟಿದೆ’’ ಎಂದು ಅಭಿಪ್ರಾಯಪಡುತ್ತಾರೆ.
‘‘ಜನಪ್ರಿಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ ಸರಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು. ಭಾರತೀಯ ಚಿತ್ರಗಳನ್ನು ರಫ್ತು ಮಾಡುವ ಅಗತ್ಯವಿದೆ. ಜತೆಗೆ ಹೆಚ್ಚಿನ ಚಿತ್ರಮಂದಿರಗಳೂ ಅಗತ್ಯ. ಬಹುಶಃ ಇದು ಭಾರತೀಯ ಚಿತ್ರರಂಗಕ್ಕೆ ನಿಜವಾಗಿಯೂ ನೆರವಾಗುತ್ತದೆ ಎಂಬ ನಂಬಿಕೆ ನನ್ನದು’’
ಆಸಕ್ತಿದಾಯಕ ಕಥೆ ದೊರಕಿದರೆ ಸಹಭಾಗಿತ್ವಕ್ಕೆ ಕೂಡಾ ಸಿದ್ಧ ಎಂದು ಆಮಿರ್ ಹೇಳಿದ್ದಾರೆ.