ದಾಳಿಗೆ ಬಂದಿದ್ದ ಅಧಿಕಾರಿಗಳ ವಿರುದ್ಧ ಎಮ್ಮೆಗಳನ್ನು ‘ಛೂ’ಬಿಟ್ಟ ಡೇರಿ ಮಾಲಕರು

Update: 2017-06-04 09:52 GMT

ಜಬಲ್ಪುರ,ಜೂ.4: ಶನಿವಾರ ಅಕ್ರಮ ಡೇರಿಗಳ ಮೇಲೆ ದಾಳಿಗೆ ತೆರಳಿದ್ದ ಜಬಲ್ಪುರ ನಗರಾಡಳಿತದ ಅಧಿಕಾರಿಗಳು ತಾವೇ ದಾಳಿಗೊಳಗಾಗಿ ಕಾಲಿಗೆ ಬುದ್ಧಿ ಹೇಳಿದ್ದಾರೆ. ಡೇರಿಗಳ ಮಾಲಕರು ತಮ್ಮಲ್ಲಿದ್ದ ನೂರಾರು ಎಮ್ಮೆಗಳಿಗೆ ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿ ಅಧಿಕಾರಿಗಳ ವಿರುದ್ಧ ‘ಛೂ’ ಬಿಟ್ಟಿದ್ದರು. ಬಾಹುಬಲಿ-2ರ ಶೈಲಿಯಲ್ಲಿ ಎಮ್ಮೆಗಳ ದಾಳಿ ಮತ್ತು ನಂತರ ನಡೆದ ಕಲ್ಲುಗಳ ತೂರಾಟದಿಂದಾಗಿ ಓರ್ವ ಟೌನ್ ಇನ್‌ಸ್ಪೆಕ್ಟರ್ ಮತ್ತು ಸುಮಾರು ಒಂದು ಡಝನ್ ಜನರು ಗಾಯಗೊಂಡಿದ್ದಾರೆ.

ಬಂಧಮುಕ್ತಗೊಂಡಿದ್ದ 500ಕ್ಕೂ ಅಧಿಕ ಎಮ್ಮೆಗಳು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಹಾಯಾಗಿ ಓಡಾಡಿಕೊಂಡಿದ್ದು, ಅವುಗಳನ್ನು ತೆರವುಗೊಳಿಸುವ ಸಾಹಸಕ್ಕೆ ಯಾರೂ ಮುಂದಾಗಿರಲಿಲ್ಲ. ಹೀಗಾಗಿ ವಾಹನಗಳ ಸಂಚಾರ ಹಲವಾರು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.

ಪರಿಯತ್ ನದಿ ದಡದಲ್ಲಿರುವ ಇಮ್ಲಿಯಾ ಗ್ರಾಮದಲ್ಲಿ ಅಕ್ರಮವಾಗಿ ಕಾರ್ಯಾಚರಿ ಸುತ್ತಿರುವ 20ಕ್ಕೂ ಅಧಿಕ ಹಾಲಿನ ಡೇರಿಗಳನ್ನು ಜಿಲ್ಲಾಡಳಿತವು ಗುರುತಿಸಿತ್ತು. ಅವುಗಳನ್ನು ತೆರವುಗೊಳಿಸಲು ಪೊಲೀಸರು ಸೇರಿದಂತೆ ಅಧಿಕಾರಿಗಳ ಜಂಟಿ ತಂಡವು ತೆರಳಿತ್ತು. ಆದರೆ ಈ ಬಗ್ಗೆ ಮೊದಲೇ ಸುಳಿವು ಪಡೆದಿದ್ದ ಡೇರಿಗಳ ಮಾಲಕರು ಎಮ್ಮೆಗಳ ದಾಳಿ ಮತ್ತು ಕಲ್ಲುತೂರಾಟದಿಂದ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದರು.

ಎಮ್ಮೆಗಳ ದಾಳಿ ಮತ್ತು ಕಲ್ಲುತೂರಾಟದಿಂದ ಧೃತಿಗೆಟ್ಟ ಪೊಲೀಸರು ಅಶ್ರುವಾಯು ಪ್ರಯೋಗದ ಜೊತೆಗೆ ಲಾಠಿಪ್ರಹಾರವನ್ನೂ ನಡೆಸಬೇಕಾಯಿತು. ಡೇರಿಗಳ ಮಾಲಕರು ಹೆದ್ದಾರಿಯಲ್ಲಿದ್ದ ಸುಮಾರು ಒಂದು ಡಝನ್ ವಾಹನಗಳನ್ನು ಜಖಂಗೊಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ಕರೆಸಲಾಗಿದ್ದು, ಹಲವಾರು ಗಂಟೆಗಳ ಕಾದಾಟದ ಬಳಿಕ ಆರು ಅಕ್ರಮ ಡೇರಿಗಳನ್ನು ನೆಲಸಮಗೊಳಿಸುವಲ್ಲಿ ಅಧಿಕಾರಿಗಳು ಸಫಲರಾಗಿದ್ದಾರೆ.

ಒಂದು ತಿಂಗಳ ಹಿಂದೆಯೇ ಈ ಡೇರಿಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತವು ನೋಟಿಸ್‌ಗಳನ್ನು ಜಾರಿಗೊಳಿಸಿತ್ತಾದರೂ, ಮಾಲಕರು ಅವುಗಳನ್ನು ಕಸದ ಬುಟ್ಟಿಗೆಸೆ ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News