ಅಪ್ರಾಪ್ತೆಯ ಮದುವೆಯನ್ನು ತಡೆಹಿಡಿದ ಕೋರ್ಟು
ವರ್ಕಲ, ಜೂ.4: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಮಾಡಿ ಕಳುಹಿಸುವ ತಾಯಿಯ ಪ್ರಯತ್ನವನ್ನು ವರ್ಕಲ ಬ್ಲಾಕ್ ಬಾಲ್ಯವಿವಾಹ ನಿರೋಧ ಅಧಿಕಾರಿಯ ಮಧ್ಯಪ್ರವೇಶದಿಂದಾಗಿ ಕೋರ್ಟು ತಡೆಹಿಡಿದಿದೆ. ವರ್ಕಲ ಅಭಿವೃದ್ಧಿ ಬ್ಲಾಕ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚೆರುನ್ನಿಯೂರ್ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಪ್ಲಸ್‌ಟು(ದ್ವಿತೀಯ ಪಿಯುಸಿ) ವಿದ್ಯಾರ್ಥಿನಿಯನ್ನು ಚೆಮ್ಮರುತ್ತಿ ಪಂಚಾಯತ್ ವ್ಯಾಪ್ತಿಯ ಅಂಗವಿಕಲ ಯುವಕನೊಂದಿಗೆ ಮದುವೆ ಗೊತ್ತುಪಡಿಸಲಾಗಿತ್ತು. ರವಿವಾರ ವರನ ಮನೆಯಲ್ಲಿ ಮದುವೆ ನಡೆಯಬೇಕಿತ್ತು. ಬಾಲಕಿಯ ತಂದೆ ಈ ಹಿಂದೆ ತೀರಿಹೋಗಿದ್ದಾರೆ.
ತಾಯಿ ಬಡವರು. ಆದ್ದರಿಂದ ಮಗಳ ಮದುವೆಯನ್ನು ಬೇಗನೆ ಮಾಡಿಮುಗಿಸಲು ಅವರು ತೀರ್ಮಾನಿಸಿದ್ದರೆಂದು ಹೇಳಲಾಗುತ್ತಿದೆ. ಹುಡುಗಿ ಕುಟುಂಬ ಬಡವರೆನ್ನುವುದನ್ನು ಮನಗಂಡ ವರ ಮತ್ತು ಕುಟುಂಬ ಮದುವೆಯ ಸಂಪೂರ್ಣ ವೆಚ್ಚವನ್ನು ವಹಿಸಿಕೊಂಡಿತ್ತು. ಮದುವೆಗೆ ಆಮಂತ್ರಣ ಪತ್ರಿಕೆ ಮುದ್ರಿಸಿರಲಿಲ್ಲ. ಉಭಯ ಕಡೆಗಳಲ್ಲಿ ನಿಕಟ ಸಂಬಂಧಿಕರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು.
ಆದರೆ ಶನಿವಾರ ವರ್ಕಲ ಬ್ಲಾಕ್ ಬಾಲ್ಯವಿವಾಹ ನಿರೋಧ ಅಧಿಕಾರಿಗೆ ಹೀಗೊಂದು ಮದುವೆ ನಡೆಯುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಅವರು ಕೂಡಲೇ ವರ್ಕಲ ಕೋರ್ಟಿಗೆ ದೂರು ನೀಡಿದ್ದಾರೆ. ಕೋರ್ಟು ಬಾಲ್ಯವಿವಾಹವನ್ನು ತಡೆಹಿಡಿದು ಆದೇಶ ಹೊರಡಿಸಿದೆ. ಬಾಲಕಿ ಮತ್ತು ವರನ ಸಂಬಂಧಿಕರಿಗೆ ಆದೇಶವನ್ನು ತಲುಪಿಸಲು ತುರ್ತಾಗಿ ತಲುಪಿಸುವಂತೆ ಕೋರ್ಟು ಪೊಲೀಸರಿಗೆ ಸೂಚಿಸಿದೆ. ಎರಡು ತಿಂಗಳ ಮೊದಲು ಈ ಮದುವೆಯ ಸಿದ್ಧತೆಯನ್ನು ಮಾಡಿದ್ದಾಗ ಇದೇ ಅಧಿಕಾರಿ ಅವರಿಗೆ ಮನವರಿಕೆ ಮಾಡಿಕೊಟ್ಟು ಮದುವೆಯನ್ನು ನಿಲ್ಲಿಸಿದ್ದರು. ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಮದುವೆ ನಡೆಸುತ್ತೇವೆ ಎಂದು ಹಿರಿಯರು ಮಾತು ಕೊಟ್ಟಿದ್ದರು.