ಡ್ಯಾನ್ಸ್ ಮಾಡುತ್ತಿದ್ದ ಮದುಮಗ ಹೃದಯಾಘಾತಕ್ಕೆ ಬಲಿ
ಭಬುವಾ(ಬಿಹಾರ),ಜೂ.4: ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ಮದುಮಗ ಹಸೆಮಣೆಯನ್ನೇರುವ ಕೆಲವೇ ಕ್ಷಣಗಳ ಮೊದಲು ಹೃದಯಾಘಾತದಿಂದ ಮೃತಪಟ್ಟ ದುರಂತ ಘಟನೆ ಕೈಮುರ್ ಜಿಲ್ಲೆಯ ಚೌಬೆಪುರ ಗ್ರಾಮದಲ್ಲಿ ಸಂಭವಿಸಿದೆ. ಪ್ರತ್ಯೇಕ ಘಟನೆಯಲ್ಲಿ ಸಂಭ್ರಮಾಚರಣೆಗಾಗಿ ಹಾರಿಸಿದ್ದ ಗುಂಡಿಗೆ ಮದುಮಗನ ಸೋದರ ಸಂಬಂಧಿ ಬಲಿಯಾದ ಘಟನೆ ರೋಹ್ತಾಸ್‌ನಲ್ಲಿ ನಡೆದಿದೆ.
ಕೈಮುರ್ ಜಿಲ್ಲಾಕೇಂದ್ರ ಭಬುವಾದಿಂದ ಸುಮಾರು 50 ಕಿ.ಮೀ.ದೂರದ ಸರಣಪುರ ಗ್ರಾಮದ ನಿವಾಸಿ ಶಶಿಕಾಂತ ಪಾಂಡೆ(25)ಯ ಮದುವೆ ಸಮೀಪದ ಚೌಬೆಪುರ ಗ್ರಾಮದಲ್ಲಿ ನಡೆಯಲಿತ್ತು. ವರನ ಕಡೆಯ ದಿಬ್ಬಣ ಮದುವೆಯ ಹಾಲ್‌ನೆದುರು ತಲುಪಿದಾಗ ಶಶಿಕಾಂತನ ಗೆಳೆಯರು ಅಲಂಕೃತ ಕಾರಿನಲ್ಲಿ ಆಸೀನನಾಗಿದ್ದ ಆತನನ್ನು ಹೊರಗೆಳೆದು ತಮ್ಮೊಂದಿಗೆ ಡ್ಯಾನ್ಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಭಾರೀ ಹೃದಯಾಘಾತದಿಂದಾಗಿ ಶಶಿಕಾಂತ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಶಶಿಕಾಂತ ತನ್ನ ತಂದೆಯ ನ್ಯಾಯಬೆಲೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ. ಆತನ ಸಾವು ಎರಡೂ ಕುಟುಂಬಗಳನ್ನು ದುಃಖದ ಮಡುವಲ್ಲಿ ತಳ್ಳಿದೆ.
ಅತ್ತ ರೋಹ್ತಾಸ್‌ನ ಗೊನಾಲಿಯಾ ತೋಲಾ ಗ್ರಾಮದಲ್ಲಿ ಸಂಭ್ರಮಾಚರಣೆಯ ಗುಂಡು ತಗುಲಿ ಮದುಮಗನ ಸೋದರ ಸಂಬಂಧಿ ಜಿತೇಂದ್ರ ಸಿಂಗ್(33) ಎಂಬಾತ ಮೃತಪಟ್ಟಿದ್ದಾನೆ. ಬಾರಾತ್‌ನಲ್ಲಿ ಹೆಣ್ಣುಮಕ್ಕಳು ನರ್ತನದಲ್ಲಿ ತೊಡಗಿದ್ದು ಭಾರೀ ಸಂಭ್ರಮ ಮನೆ ಮಾಡಿತ್ತು. ಈ ವೇಳೆ ಕೈಗಳಲ್ಲಿ ರೈಫಲ್ ಮತ್ತು ನಾಡಪಿಸ್ತೂಲುಗಳನ್ನು ಹಿಡಿದಿದ್ದ ಮೂವರು ಪಾನಮತ್ತ ಯುವಕರು ಬಾರಾತ್‌ನಲ್ಲಿ ಸೇರಿಕೊಂಡಿದ್ದರು. ಬಳಿಕ ನರ್ತನ ನಡೆಯುತ್ತಿದ್ದ ವೇದಿಕೆಗೆ ತೆರಳಿ ಸಂಭ್ರಮಾಚರಣೆಗೆ ಗುಂಡುಗಳನ್ನು ಹಾರಿಸತೊಡಗಿದ್ದರು. ವೇದಿಕೆಗೆ ತೆರಳಿದ್ದ ಸಿಂಗ್ ಗುಂಡು ಹಾರಾಟವನ್ನು ಆಕ್ಷೇಪಿಸಿ ಆ ಮೂವರನ್ನು ಬಲವಂತ ದಿಂದ ಕೆಳಗಿಳಿಸಿದ್ದ.
ಅದರೆ ಯುವಕರು ವೇದಿಕೆಯತ್ತಲೇ ಗುಂಡು ಹಾರಿಸಿದ್ದು, ಅದಕ್ಕೆ ಸಿಂಗ್ ಬಲಿಯಾಗಿದ್ದಾನೆ.
ಘಟನೆಯ ಬಳಿಕ ಪರಾರಿಯಾಗಲು ಯತ್ನಿಸಿದ್ದ ಯುವಕರನ್ನು ಗ್ರಾಮಸ್ಥರು ಬೆನ್ನಟ್ಟಿದ್ದು, ಇಬ್ಬರು ಸಿಕ್ಕಿಬಿದ್ದರೆ ಇನ್ನೋರ್ವ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಇಬ್ಬರನ್ನೂ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು ಅವರನ್ನು ಪೊಲಿಸರಿಗೆ ಒಪ್ಪಿಸಿದ್ದಾರೆ.