×
Ad

ಖಾಸಗಿ ಶಾಲೆಗಳಿಂದ ಶುಲ್ಕ ಸ್ವರೂಪ ಕುರಿತು ಮಾಹಿತಿ ಕೇಳಿದ ಸಿಬಿಎಸ್‌ಇ

Update: 2017-06-04 19:32 IST

ಹೊಸದಿಲ್ಲಿ,ಜೂ.4: ಅಧಿಕ ಶುಲ್ಕವನ್ನು ವಸೂಲು ಮಾಡುವ ಜೊತೆಗೆ ಗುಪ್ತವೆಚ್ಚಗಳನ್ನು ಹೇರುವ ಖಾಸಗಿ ಶಾಲೆಗಳ ಸುಲಿಗೆ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು ತಮ್ಮ ಶುಲ್ಕ ಸ್ವರೂಪ ಮತ್ತು ಇತ್ತೀಚಿನ ವರ್ಷಗಳಲ್ಲಿ ಮಾಡಲಾಗಿರುವ ಏರಿಕೆಗಳ ಬಗ್ಗೆ ಮಾಹಿತಿಗಳನ್ನು ಸಲ್ಲಿಸುವಂತೆ ಅವುಗಳಿಗೆ ಸೂಚಿಸಿದೆ.

ತಮ್ಮ ಆವರಣದಲ್ಲಿ ಸಮವಸ್ತ್ರಗಳು ಮತ್ತು ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ಖಾಸಗಿ ಶಾಲೆಗಳನ್ನು ‘ಅಂಗಡಿ ’ಗಳನ್ನಾಗಿ ಮಾಡುತ್ತಿರುವುದರ ವಿರುದ್ಧ ಸಿಬಿಎಸ್‌ಇ ಕೆಲವು ವಾರಗಳ ಹಿಂದಷ್ಟೇ ಅವುಗಳಿಗೆ ಎಚ್ಚರಿಕೆ ನೀಡಿತ್ತು.

 ಅಧಿಕ ಶುಲ್ಕಗಳನ್ನು ವಸೂಲು ಮಾಡದಂತೆ ಶಾಲೆಗಳಿಗೆ ಸೂಚಿಸಿದ್ದೇವೆ. ಶುಲ್ಕಗಳು ನ್ಯಾಯಯುತವಾಗಿರಬೇಕು ಮತ್ತು ಯಾವುದೇ ಗುಪ್ತವೆಚ್ಚಗಳನ್ನು ಹೇರುವಂತಿಲ್ಲ. ಈ ಬಗ್ಗೆ ಪೋಷಕರಿಂದ ನಮಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಹಲವಾರು ಶಾಲೆಗಳು ತಮ ಶುಲ್ಕಸ್ವರೂಪದ ಕುರಿತು ದತ್ತಾಂಶಗಳನ್ನು ಸಿಬಿಎಸ್‌ಇಗೆ ಕಳುಹಿಸಿವೆ ಮತ್ತು ಅವುಗಳನ್ನು ವಿಶ್ಲೇಷಿಸಲಾಗುತ್ತಿದೆ. ಈ ಮಾಹಿತಿಗಳನ್ನು ಸಲ್ಲಿಸಿರದ ಶಾಲೆಗಳಿಗೆ ನೆನಪಿನೋಲೆಗಳನ್ನು ಕಳುಹಿಸಲಾಗಿದೆ. ಸೂಚನೆಯನ್ನು ಪಾಲಿಸದಿದ್ದರೆ ಅವುಗಳ ವಿರುದ್ಧ ದಂಡನಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.

ಶಾಲೆಗಳಲ್ಲಿ ಅಧಿಕ ಶುಲ್ಕ ವಸೂಲಿಗೆ ಕಡಿವಾಣ ಹಾಕಲು ಗುಜರಾತ್ ಸರಕಾರವು ಕಳೆದ ತಿಂಗಳು ಮಸೂದೆಯೊಂದನ್ನು ಮಂಡಿಸಿದ್ದು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಿಗೆ ಅನುಕ್ರಮವಾಗಿ 15,000 ರೂ., 25,000 ರೂ. ಮತ್ತು 27,000 ರೂ. ಶುಲ್ಕವನ್ನು ನಿಗದಿಗೊಳಿಸಲು ಉದ್ದೇಶಿಸಲಾಗಿದೆ. ಈ ಮಸೂದೆಯು ಹಲವಾರು ರಾಜ್ಯಗಳ ಜೊತೆಗೆ ಕೇಂದ್ರ ಸರಕಾರದ ಗಮನವನ್ನೂ ಸೆಳೆದಿದೆ.

250,2,500,25,000 ಮತ್ತು 2,50,000 ರೂ.ಶುಲ್ಕಗಳನ್ನೂ ವಿಧಿಸುವ ಖಾಸಗಿ ಶಾಲೆಗಳಿವೆ. ಆಯ್ಕೆ ಮಕ್ಕಳ ಪೋಷಕರಿಗೆ ಬಿಟ್ಟಿದ್ದು ಎಂದ ಜಾವಡೇಕರ್, ಖಾಸಗಿ ಹೂಡಿಕೆ ದೇಶದ ಜಿಡಿಪಿಗೆ ಕೊಡುಗೆ ಸಲ್ಲಿಸುವುದರಿಂದ ಅದನ್ನು ನಾವು ಪ್ರೋತ್ಸಾಹಿಸು ತ್ತೇವೆ, ಆದರೆ ಶಾಲೆಗಳು ಅಧಿಕ ಶುಲ್ಕಗಳನ್ನು ವಿಧಿಸಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News