ಅಪಘಾತದಿಂದ ರೊಚ್ಚಿಗೆದ್ದ ಗುಂಪಿನಿಂದ ವಾಹನಗಳಿಗೆ ಬೆಂಕಿ
ಪುರಿ(ಒಡಿಶಾ),ಜೂ.5: ಪುರಿ ಜಿಲ್ಲೆಯ ಪಿಪಿಲಿ ಎಂಬಲ್ಲಿ ಸೋಮವಾರ ಬೆಳಿಗ್ಗೆ ಬಸ್ಸೊಂದು ಮೊಪೆಡ್‌ಗೆ ಢಿಕ್ಕಿ ಹೊಡೆದ ಪರಿಣಾಮ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಜನರು ಮೂರು ಬಸ್‌ಗಳಿಗೆ ಬೆಂಕಿ ಹಚ್ಚಿದ್ದು, ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ.
ಪುರಿಯಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ದಂಪತಿ ಪ್ರಯಾಣಿಸುತ್ತಿದ್ದ ಮೊಪೆಡ್‌ನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಅದಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಹಾದು ಖಾನ್(70) ಮತ್ತು ಅವರ ಪತ್ನಿ ಕುನಿ ಬೀಬಿ(68) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉದ್ರಿಕ್ತ ಜನರು ಅಪಘಾತವೆಸಗಿದ ಬಸ್ಸಿನ ಜೊತೆಗೆ ಇನ್ನೆರಡು ಖಾಸಗಿ ಬಸ್‌ಗಳಿಗೂ ಬೆಂಕಿ ಹಚ್ಚಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಜನರು ಆಗ್ರಹಿಸಿದ್ದಾರೆ.
ಭಾರೀಸಂಖ್ಯೆಯಲ್ಲಿ ಸೇರಿದ್ದ ಜನರು ರಸ್ತೆ ತಡೆ ನಡೆಸಿದ್ದು, ಹೆಚ್ಚಿನ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಪರಿಸ್ಥಿತಿ ಉದ್ವಿಗ್ನವಾಗಿದೆಯಾದರೂ ನಿಯಂತ್ರಣದಲ್ಲಿದೆ ಎಂದು ಎಎಸ್‌ಪಿ ಬನಬಹಾರಿ ಸಾಹು ತಿಳಿಸಿದರು. ಪ್ರತಿಭಟನಾಕಾರರು ಕೆಲವು ಪೊಲೀಸರ ಮೇಲೆ ಹಲ್ಲೆಯನ್ನೂ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.