ಯುಪಿಎಸ್ಸಿ ಟಾಪರ್ ನಂದಿನಿಗೆ ಸಿಕ್ಕಿದ ಅಂಕ ಎಷ್ಟು ಗೊತ್ತೇ ?

Update: 2017-06-05 15:41 GMT

ಹೊಸದಿಲ್ಲಿ, ಜೂ.5: ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೇ ಟಾಪರ್ ಆಗಿ ಹೊರಹೊಮ್ಮಿರುವ ಕರ್ನಾಟಕದ ನಂದಿನಿ ಕೆ.ಆರ್. ಗಳಿಸಿದ ಅಂಕಗಳ ಮಾಹಿತಿ ಪ್ರಕಟವಾಗಿದ್ದು, ಕಳೆದ ವರ್ಷದ ಟಾಪರ್ ಟೀನಾ ದಾಬಿಯನ್ನು ನಂದಿನಿ ಹಿಂದಿಕ್ಕಿದ್ದಾರೆ,

ಯುಪಿಎಸ್ಸಿಯಲ್ಲಿ 55.3 ಶೇ, ಅಂಕ ಗಳಿಸಿ ಉತ್ತೀರ್ಣರಾಗಿರುವ ನಂದಿನಿ ಕೆ.ಆರ್. 2,025ರಲ್ಲಿ 1,120 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ. ಐಎಎಸ್, ಐಎಫ್ ಎಸ್ ಹಾಗೂ ಐಪಿಎಸ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ  ನಾಗರಿಕ ಸೇವಾ ಪರೀಕ್ಷೆ ಪೂರ್ವಭಾವಿ, ಮೈನ್ ಹಾಗೂ ಸಂದರ್ಶನಗಳ ಮೂರು ಹಂತಗಳಲ್ಲಿ ನಡೆಯುತ್ತದೆ. ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಮೇ 31ರಂದು ಪ್ರಕಟವಾಗಿದ್ದು, ಕರ್ನಾಟಕದ ನಂದಿನಿ ಕೆ.ಆರ್. ಟಾಪರ್ ಆಗಿ ಹೊರಹೊಮ್ಮಿದ್ದರು. 1,120 ಅಂಕಗಳ ಸಾಧಕಿ ನಂದಿನಿ ಮೈನ್ ನಲ್ಲಿ 927 ಹಾಗೂ ಸಂದರ್ಶನದಲ್ಲಿ 193 ಅಂಕಗಳನ್ನು ಗಳಿಸಿದ್ದಾರೆ.

ಎರಡನೆ ರ್ಯಾಂಕ್ ಗಳಿಸಿರುವ ಅನ್ ಮೋಲ್ ಶೇರ್ ಸಿಂಗ್ ಬೇಡಿ 1,105 ಅಂಕ (54.56) ಅಂಕಗಳನ್ನು ಗಳಿಸಿದ್ದರೆ, ಮೂರನೆ ರ್ಯಾಂಕ್ ನ ಗೋಪಾಲಕೃಷ್ಣ ರೋಣಂಕಿ 1,101 (54.37) ಅಂಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷದ ಟಾಪರ್ ಟೀನಾ ದಾಬಿ 1,063 (52.49) ಅಂಕಗಳನ್ನು ಗಳಿಸಿದ್ದರು.

ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಸಾಮಾನ್ಯ ವಿಭಾಗದ 500 ಮಂದಿ, ಇತರ ಹಿಂದುಳಿದ ವರ್ಗದ 347 ಮಂದಿ, ಪರಿಶಿಷ್ಟ ಜಾತಿಯ 163 ಮಂದಿ ಹಾಗೂ ಪರಿಶಿಷ್ಟ ಪಂಗಡದ 89 ಮಂದಿ ಸೇರಿದಂತೆ 1,099 ಅಭ್ಯರ್ಥಿಗಳನ್ನು ಕೇಂದ್ರ ಸರಕಾರದ ವಿವಿಧ ಸೇವೆಗಳಿಗೆ ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News