ಪುರಾಣಿಕರ ಗೋವನಿತಾಶ್ರಮ!

Update: 2017-06-07 18:46 GMT

ಅಂದು ರಾತ್ರಿ ಅನಂತಭಟ್ಟರು ಅಕ್ಷರಶಃ ವ್ಯಗ್ರರಾಗಿದ್ದರು. ಗುರೂಜಿಯೂ ಪರೋಕ್ಷವಾಗಿ ಪಪ್ಪುವನ್ನು ಸಂಪ್ರದಾಯ ಬಿಟ್ಟವನು ಎಂದೇ ಹೇಳಿ ಬಿಟ್ಟರಲ್ಲ? ಅವರಿಗೆ ತೀರಾ ಆಘಾತವಾಗಿತ್ತು.

‘‘ಹೂಂ...ಸಂಪ್ರದಾಯ, ದೇಶ ಎರಡನ್ನೂ ಬಿಟ್ಟು ಹೋದವರು ಯಾರು ಎನ್ನುವುದು ಇಡೀ ಊರಿಗೆ ಗೊತ್ತಿದೆ. ಜಾನಕಿ ಅಮೆರಿಕದಲ್ಲಿ ಕ್ರಿಶ್ಚಿಯನ್ ಪ್ರೊಫೆಸರ್ ಒಬ್ಬನನ್ನು ಪ್ರೀತಿ ಮಾಡಿ ಮದುವೆಯಾಗಿದ್ದಂತೆ. ಮುಚ್ಚಿಟ್ಟಾಕ್ಷಣ ನಮಗೆ ತಿಳಿಯದೇ ಹೋಗುತ್ತಯೇ? ಎಲ್ಲರೂ ಆಡಿಕೊಳ್ಳುತ್ತಿದ್ದಾರೆ.....ಹೇಳೋದು ಶಾಸ್ತ್ರ, ಇಕ್ಕೋದು ಗಾಳ....’’ ಜೋರಾಗಿ ಒದರಿದ್ದರು ಅನಂತ ಭಟ್ಟರು. ಒಳಗೆ ಸೂರು ನೋಡುತ್ತಾ ಮಲಗಿದ್ದ ಪಪ್ಪುವಿಗೆ ಅದು ಸ್ಪಷ್ಟವಾಗಿ ಕೇಳಿಸಿತ್ತು. ಲಕ್ಷ್ಮಮ್ಮನೇ ಸಮಾಧಾನಿಸಿದರು ‘‘ನೋಡಿ...ಅವರು ಹೇಳಿದ್ದು ಸರಿಯೇ ಅಲ್ಲವೆ? ಈಗ ನಮ್ಮ ಜಾತಿಯಲ್ಲಿ ಹೆಣ್ಣುಗಳು ಎಲ್ಲಿಂಟು. ಎಲ್ಲ ಬೆಂಗಳೂರು ಸೇರಿದ್ದಾರೆ. ನೀವು ಪದ್ಮನಾಭನ ಜೊತೆಗೆ ಒಮ್ಮೆ ಪುರಾಣಿಕರನ್ನು ಕಂಡು ಬನ್ನಿ....ಆದದ್ದಾಗಲಿ...’’

***

ಪುತ್ತೂರಿನ ಪ್ರಭಾಕರ ಪುರಾಣಿಕರು ನಡೆಸುತ್ತಿರುವ ‘ಗೋವನಿತಾಶ್ರಮ’ ಆಗಾಗ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿರುತ್ತವೆ. ಅತ್ಯುತ್ತಮ ತಳಿಯ ಹಸುಗಳನ್ನು ಸಾಕುವ ಮೂಲಕ ಈ ಆಶ್ರಮ ಹೆಸರು ಪಡೆದಿದೆ. ಇದರ ಇನ್ನೊಂದು ವಿಶೇಷತೆ, ಯಾವುದೇ ಜಾತಿಯ ತೀರಾ ಬಡವರು ತಮ್ಮ ಮನೆಯಲ್ಲಿ ಜಾಸ್ತಿ ಹೆಣ್ಣು ಮಕ್ಕಳಿದ್ದರೆ ಅವರನ್ನು ಈ ಆಶ್ರಮಕ್ಕೆ ಒಪ್ಪಿಸಬಹುದು. ಅವರ ಸಂಪೂರ್ಣ ಜವಾಬ್ದಾರಿಯನ್ನು ಆಶ್ರಮ ನೋಡಿಕೊಳ್ಳುತ್ತದೆ. ಅವರ ಮದುವೆಯನ್ನು ಮಾಡಿಕೊಡುವುದೂ ಇದೇ ಆಶ್ರಮ. ಗೋವುಗಳನ್ನು ನೋಡಿಕೊಳ್ಳುವುದು, ಹಟ್ಟಿ ಗುಡಿಸುವುದು, ಅದಕ್ಕೆ ಆಹಾರ ಪದಾರ್ಥಗಳನ್ನು ಒದಗಿಸುವುದು, ಹಾಲು ಕರೆಯುವುದು ಈ ವನಿತೆಯರ ಕೆಲಸ. ಈ ಆಶ್ರಮದಲ್ಲಿ ಅಂತಹ ಹತ್ತಿಪ್ಪತ್ತು ಬಡ ತರುಣಿಯರಿದ್ದಾರೆ. ಜೊತೆಗೆ ಇವರಿಗೆ ವೈದಿಕ ಶಾಸ್ತ್ರ, ಸಂಪ್ರದಾಯಗಳನ್ನೂ ಕಲಿಸಲಾಗುತ್ತದೆ. ಒಂದು ರೀತಿಯಲ್ಲಿ ಬ್ರಾಹ್ಮಣ ಹೆಣ್ಣು ಮಕ್ಕಳಂತೆಯೇ ಇಲ್ಲಿ ಇವರು ಬದುಕುತ್ತಾರೆ. ಆಸುಪಾಸಿನ ಹಲವು ಬ್ರಾಹ್ಮಣ ಹುಡುಗರಿಗೆ ಇಲ್ಲಿನ ಹೆಣ್ಣು ಮಕ್ಕಳನ್ನು ಶುದ್ಧೀಕರಿಸಿ ಮದುವೆ ಮಾಡಿಕೊಡಲಾಗಿದೆ. ಒಮ್ಮೆ ಶುದ್ಧೀಕರಿಸಿದ ಬಳಿಕ ಅವರು ತಮ್ಮ ತಂದೆ, ತಾಯಿ, ಕುಟುಂಬ ಎಲ್ಲ ಬಿಡಿ, ಹಿಂದಿನ ಹೆಸರನ್ನೂ ಮರೆತು ಬಿಡಬೇಕು. ಅವರಿಗೆ ಅದು ಹೊಸ ಜನ್ಮ. ತಮ್ಮ ಮುಂದೆ ಕುಳಿತಿದ್ದ ಅನಂತ ಭಟ್ಟರಿಗೆ ಪುರಾಣಿಕರು ಇವನ್ನೆಲ್ಲ ವಿವರಿಸಿ ಹೇಳುತ್ತಿದ್ದರು. ಭಟ್ಟರ ಪಕ್ಕದಲ್ಲೇ ಪಪ್ಪು ಕೂಡ ಇದನ್ನು ಆಲಿಸುತ್ತಿದ್ದ. ಪದ್ಮನಾಭರು ಹೊರಗೆ ಯಾರನ್ನೋ ಕಾಯುತ್ತಿದ್ದರು.

‘‘ಏ....ಅಲ್ಲಿ ಒಳಗೆ ವನಜಾ ಉಂಟಾ ನೋಡು....ಅದನ್ನು ಸ್ವಲ್ಪ ಕರಿ...’’ ಎಂದು ಪುರಾಣಿಕರು ಯಾರಿಗೋ ಕೂಗಿ ಹೇಳಿದರು.

ಸ್ವಲ್ಪ ಹೊತ್ತಿನಲ್ಲೇ ಒಂದು ಸಣಕಲು ಹುಡುಗಿ ಬಂತು.‘‘ ಹಟ್ಟಿಯಲ್ಲಿದ್ದೆ...’’ ಎಂದು ಏನೋ ಹೇಳಲು ಪ್ರಯತ್ನಿಸಿತು.

‘‘ಇದು ವನಜಾ ಅಂತ...ಗಿರಿಯಪ್ಪ ಪೂಜಾರಿ ಎಂಬವರ ಮಗಳು. ನಾಲ್ಕು ವರ್ಷಗಳ ಹಿಂದೆ ಅವರು ಇದನ್ನು ಇಲ್ಲಿ ಬಿಟ್ಟಿದ್ದರು. ಮನೆಯಲ್ಲಿ ಆರು ಹೆಣ್ಣು ಮಕ್ಕಳು. ಇದು ಮೂರನೆಯದ್ದು. ಹೋಗು ನಾಲ್ಕು ಟೀ ಮಾಡಿಕೊಂಡು ಬಾ...’’ ಎಂದರು ಪುರಾಣಿಕರು. ವನಜಾ ತಲೆತಗ್ಗಿಸಿ ಒಳ ಹೋದಳು.

‘‘ನೋಡಿದರಲ್ಲ, ಇದೇ ಹುಡುಗಿ. ಗಿರಿಯಪ್ಪನನ್ನು ಬರಲು ಹೇಳಿದ್ದೇನೆ. ಪದ್ಮನಾಭರೇ ಅವನ ಜೊತೆಗೆ ಮಾತನಾಡುತ್ತಾರೆ. ನೀವು ಇವತ್ತೇ ಮಾತುಕತೆ ನಡೆಸಿ ಎಲ್ಲವನ್ನೂ ಮುಗಿಸಿ. ಅವನಿಗೆ ಸ್ವಲ್ಪ ದುಡ್ಡೇನಾದರೂ ಕೊಡಬೇಕಾದೀತು...’’

ಪಪ್ಪು ತಲೆಯೆತ್ತಿ ಹುಡುಗಿಯನ್ನು ನೋಡಿದ್ದನಾದರೂ ಅವನು ಯಾರನ್ನೂ ಅಲ್ಲಿ ಕಂಡಿರಲಿಲ್ಲ. ಅಲ್ಲೊಂದು ಶೂನ್ಯವಿತ್ತು. ತಂದೆಗೆ ಸರಿ ಎಂದಾದರೆ ಮದುವೆಗೆ ಒಪ್ಪುವುದು. ಅದಷ್ಟೇ ತನ್ನ ಕೆಲಸ ಎಂಬಂತೆ ಬಂದಿದ್ದ. ಆದುದರಿಂದ ಹುಡುಗಿಯ ಮುಖ ನೋಡುವುದು ಅವನ ಅಗತ್ಯವೇನೂ ಆಗಿದ್ದಿರಲಿಲ್ಲ. ಅನಂತಭಟ್ಟರಿಗೆ ಹುಡುಗಿ ಇಷ್ಟವಾಗಿರಲಿಲ್ಲ. ಆದರೆ ಇಷ್ಟವಿಲ್ಲ ಎನ್ನುವಂತಹ ಸ್ಥಿತಿಯಲ್ಲಿ ಅವರಿರಲಿಲ್ಲ. ಹುಡುಗಿಯ ಕುರಿತಂತೆ ಅವರೇನೂ ಪ್ರತಿಕ್ರಿಯಿಸಲಿಲ್ಲ. ‘ಬಡತನವನ್ನೇ ಉಂಡು ಬೆಳೆದ ಪಾಪದ ಹುಡುಗಿ’ ಅನ್ನಿಸಿತು ಅವರಿಗೆ. ಪಪ್ಪುವಿನ ಮುಖ ನೋಡಿದಾಗ ಅವರೊಳಗೆ ಏನೋ ಒಂದು ಅತೃಪ್ತಿ ಕದಲಿತು. ಅಷ್ಟರಲ್ಲಿ ‘‘ಗಿರಿಯಪ್ಪ ಬಂದಿದ್ದಾನೆ’’ ಎನ್ನುತ್ತಾ ಒಳಬಂದರು ಪದ್ಮನಾಭರು. ‘‘ಹಾಂ...ಬಂದನಾ? ಅವನಿಗೆ ನಾನು ಈ ವಿಷಯ ಈಗಾಗಲೇ ತಿಳಿಸಿದ್ದೇನೆ. ನೀವು ಹೊರಗಿನ ಆ ಕೋಣೆಯಲ್ಲಿ ಕುಳಿತು ಉಳಿದ ವಿಷಯ ಮಾತನಾಡಿ. ಪಪ್ಪು ಕೂಡ ಇರಲಿ. ಹುಡುಗನನ್ನು ನೋಡಿ ಗಿರಿಯಪ್ಪನಿಗೆ ಖುಷಿಯಾದೀತು...’’ ಪುರಾಣಿಕರು ಹೇಳಿದರು.

ಹೊರಗಿನ ಕೋಣೆಯಲ್ಲಿ ಗಿರಿಯಪ್ಪ ಪೂಜಾರಿ ಕಾಯುತ್ತಿದ್ದರು. ಒಣಗಿದ ಮುಖ. ದಿನಗೂಲಿ ಮಾಡುತ್ತಿರಬೇಕು. ಇವರನ್ನು ಕಂಡದ್ದೇ ಎದ್ದು ನಿಂತರು.

‘‘ಗಿರಿಯಪ್ಪ ಪೂಜಾರಿಯವರೇ ನಮಸ್ಕಾರ...ಇವರು ಅನಂತಭಟ್ಟರು. ಲೆಕ್ಕದ ಮಾಷ್ಟ್ರು. ಇದು ಅವರ ಮಗ ಪ್ರತಾಪ ಸಿಂಹ...’’ ಪದ್ಮನಾಭರು ಎಲ್ಲರನ್ನು ಪರಿಚಯಿಸಿದರು. ‘‘ನಮಸ್ಕಾರ ಮೇಷ್ಟ್ರೇ...ನಿಮ್ಮ ಬಗ್ಗೆ ನಾನು ತುಂಬಾ ಕೇಳಿದ್ದೇನೆ....’’ ಎಂದವರೇ ಗಿರಿಯಪ್ಪ ಎದ್ದು ನಿಂತು ಇನ್ನೊಮ್ಮೆ ನಮಸ್ಕಾರ ಎಂದರು.

‘‘ಪರವಾಗಿಲ್ಲ, ಕೂತ್ಕೊಳ್ಳಿ...’’ ಎಂದು ಪದ್ಮನಾಭರು ಹೇಳಿದರು.

‘‘ಅಡಿಕೆ ಮರ ಏರುವುದರಲ್ಲಿ ಗಿರಿಯಪ್ಪ ಪೂಜಾರಿಯವರು ಎಕ್ಸ್‌ಪರ್ಟ್. ಬಡತನ. ಮನೆಯಲ್ಲಿ ಬಹಳ ಕಷ್ಟ. ಇವರ ಮಗಳೇ ವನಜಾ. ಆಗ ನೋಡಿದಿರಲ್ಲಾ?’’ ಎಂದು ಭಟ್ಟರಿಗೆ ಪರಿಚಯಿಸಿದರು. ‘‘ಇದು ನಿಮ್ಮ ಮಗಳಿಗೆ ನಾವು ನೋಡಿದ ಹುಡುಗ...ಹೇಳಿದೆನಲ್ಲ ಮಿಲಿಟರಿ ಅಧಿಕಾರಿ....ಗೌರ್ನ್‌ಮೆಂಟ್ ಕೆಲಸ...’’ ಗಿರಿಯಪ್ಪ ಪೂಜಾರಿ ತಲೆಯಾಡಿಸಿದರು. ಪಪ್ಪು ಸುಮ್ಮಗೆ ಗಿರಿಯಪ್ಪರನ್ನು ನೋಡುತ್ತಿದ್ದ.

‘‘ನೋಡು ನೀನು ಕೇಳಿದ ಹಣ 50,000 ರೂ. ಕೊಡಲು ಅನಂತಭಟ್ಟರು ಒಪ್ಪಿದ್ದಾರೆ....’’ ಪದ್ಮನಾಭರೇ ಹೇಳಿದರು. ಅದನ್ನು ಕೇಳಿ ಅನಂತಭಟ್ಟರು ತಲೆಯೆತ್ತಿದ್ದರು. ಪದ್ಮನಾಭರು ಕಣ್ಸನ್ನೆ ಮಾಡಿ ಸುಮ್ಮಗಾಗಿಸಿದರು. ‘‘ನಿನಗೆ 50,000 ರೂಪಾಯಿ ಕೊಡುತ್ತಾರೆ. ಶುದ್ಧೀಕರಣ ಮಾಡಿದ ಬಳಿಕ ನಿನ್ನ ಮಗಳು ನಿನ್ನ ಸಂಬಂಧವನ್ನು ಕಡಿದುಕೊಳ್ಳುತ್ತಾಳೆ...’’

ಗಿರಿಯಪ್ಪರು ತಕ್ಷಣ ಮಾತನ್ನು ಕಡಿದು ಹಾಕಿ ಕೇಳಿದರು ‘‘ಹುಡುಗನಿಗೆ ಆಸ್ತಿ, ತೋಟ ಏನೂ ಇದ್ದಂತೆ ಕಾಣುವುದಿಲ್ಲ..’’

‘‘ಹಾಗೇನಿಲ್ಲ. ಸ್ವಲ್ಪ ಜಾಗ, ಒಂದು ಮನೆ ಇದೆ ಮೇಷ್ಟ್ರದು. ಅದು ನಿಮ್ಮ ಮಗಳಿಗೇ ಅಲ್ಲವಾ? ಹಾಗೆಯೇ ಹುಡುಗನಿಗೆ ಸರಕಾರಿ ಕೆಲಸ. ಕೈ ತುಂಬಾ ಸಂಬಳ. ಕ್ವಾಟ್ರಸ್ ಉಂಟು...’’

ಗಿರಿಯಪ್ಪರಿಗೆ ಸಮಾಧಾನವಾಗಲಿಲ್ಲ ‘‘ಹಾಗಲ್ಲ....ಮಿಲಿಟರಿ ಕೆಲಸ ಎಂದರೆ ಡೇಂಜರ್ ಕೆಲಸವಲ್ಲವ?’’

‘‘ಡೇಂಜರ್ ಯಾವುದರಲ್ಲಿಲ್ಲ...ದಿನಕ್ಕೆ ಎಷ್ಟು ಆಕ್ಸಿಡೆಂಟ್ ಆಗುತ್ತವೆ....ಅದಕ್ಕೆಂತ ಯಾರೂ ವಾಹನಗಳಲ್ಲಿ ಓಡಾಡುವುದೇ ಇಲ್ಲವೆ? ಮಿಲಿಟರಿ ಎಂದರೆ ಎಲ್ಲ ಸವಲತ್ತೂ ಇರುತ್ತವೆ. ನಿವೃತ್ತಿಯಾದರೆ ಭೂಮಿ ಕೂಡ ಕೊಡುತ್ತಾರೆ...’’

‘‘ಆದರೂ...’’ ಗಿರಿಯಪ್ಪ ಗೊಣಗಿದರು.

‘‘ಎಂತದು ಹೇಳಿ...ನಿಮಗೆ ಕೊಟ್ಟ ಹಣದಲ್ಲಿ ಕಡಿಮೆಯಾಗಿದ್ದರೆ ಅದನ್ನು ಸರಿ ಮಾಡಿಸುವ’’ ಪದ್ಮನಾಭ ವ್ಯವಹಾರ ಮಾತನಾಡಿದರು.

‘‘ಹಾಗಲ್ಲ, ಹುಡುಗನಿಗೆ ಯಾವಾಗ ಏನು ಬೇಕಾದರೂ ಆಗಬಹುದಲ್ಲ....ಆಗ ನನ್ನ ಮಗಳ ಗತಿಯೇನು?’’ ಗಿರಿಯಪ್ಪ ತಕರಾರು ತೆಗೆದರು. ‘‘ಹಾಗೇನಾದರೂ ಆದರೆ ಸರಕಾರದಿಂದ ಸಾಕಷ್ಟು ಪರಿಹಾರವೂ ಸಿಗುತ್ತದೆ...’’

‘‘ಪರಿಹಾರ ನೇರವಾಗಿ ನನ್ನ ಮಗಳ ಹೆಸರಿಗೇ ಸಿಗುತ್ತದೆಯೋ?’’ ಗಿರಿಯಪ್ಪ ಕೇಳಿ ಬಿಟ್ಟರು.

ಪಪ್ಪು ಒಮ್ಮೆಲೆ ಎದ್ದು ನಿಂತ. ತಂದೆಯ ಕೈ ಹಿಡಿದು ಆರ್ತನಾಗಿ ಕೇಳಿದ ‘‘ಅಪ್ಪ...ಇಲ್ಲಿಂದ ಹೋಗೋಣ....ಅಪ್ಪಾ ದಮ್ಮಯ್ಯ ಅಪ್ಪಾ...’’ ಅನಂತಭಟ್ಟರಿಗೂ ಅಲ್ಲಿ ಒಂದು ನಿಮಿಷ ನಿಲ್ಲುವುದು ಸರಿ ಅನ್ನಿಸಲಿಲ್ಲ. ಪದ್ಮನಾಭ, ಗಿರಿಯಪ್ಪ ನೋಡನೋಡುತ್ತಿದ್ದಂತೆಯೇ ಮಗನೊಂದಿಗೆ ಅನಂತಭಟ್ಟರು ನಡೆದೇ ಬಿಟ್ಟರು. ಅರ್ಧ ದಾರಿ ಸವೆದಿರಲಿಕ್ಕಿಲ್ಲ. ಅನಂತಭಟ್ಟರು ಇದ್ದಕ್ಕಿದ್ದ ಹಾಗೆಯೇ ಕುಕ್ಕರಿಸಿ ಗಳಗಳನೆ ಅಳತೊಡಗಿದರು. ‘‘ಕ್ಷಮಿಸಿ ಬಿಡೋ ಕಂದ, ನನ್ನ ಕ್ಷಮಿಸಿ ಬಿಡಪ್ಪ. ಈ ಸಂಬಂಧ ನಮಗೆ ಬೇಡ. ಇಂತಹ ಸಂಬಂಧ ನಮಗೆ ಬೇಡವೇ ಬೇಡ. ನೋಡು...ನಿನಗೆ ನಮ್ಮದೇ ಸಮುದಾಯದ ಚಂದದ ಹುಡುಗಿಯನ್ನು ನೋಡಿ ಮದುವೆ ಮಾಡಿಲ್ಲ, ನಾನು ಲೆಕ್ಕದ ಮೇಷ್ಟ್ರೇ ಅಲ್ಲ......’’

ಅಪ್ಪನ ಸ್ಥಿತಿ ಪಪ್ಪುವನ್ನು ಇನ್ನಷ್ಟು ಕಂಗಾಲಾಗಿಸಿತ್ತು. ‘‘ಕಣ್ಣೀರು ಒರೆಸ್ಕೋ ಅಪ್ಪಾ. ಎಲ್ಲ ನೋಡ್ತಾ ಇದ್ದಾರೆ. ನೀನು ಹೇಳಿದ ಹಾಗೆಯೇ ಆಗಲಿ. ಇನ್ನೊಂದು ರಜೆಯಲ್ಲಿ ಬರೋವಾಗ ಹುಡುಗಿ ಹುಡುಕಿಟ್ಟಿರು. ಸಮಾಧಾನ ಮಾಡ್ಕೋ...ಅಮ್ಮನಲ್ಲಿ ಇದೆಲ್ಲ ಹೇಳ್ಬೇಡಾ...ಹುಡುಗಿ ಕುಟುಂಬ ಹಿಡಿಸಿಲ್ಲ ಅನ್ನು...’’ ಸಮಾಧಾನಿಸಿದ. ಅನಂತಭಟ್ಟರು ಕಣ್ಣೀರು ಒರೆಸಿಕೊಂಡರು. ಮನೆಗೆ ಬಂದ ಬಳಿಕ ತಂದೆ, ಮಗ ಅದು ಹೇಗೋ ವಿಷಯಾಂತರ ಮಾಡಿದರು. ‘‘ಹುಡುಗಿ ಹಿಡಿಸಿಲ್ಲ ಕಣೇ...’’ ಎಂದರು ಅನಂತಭಟ್ಟ. ‘‘ನಿಮಗೆ ಹಿಡಿಸಿಲ್ಲ ಎಂದ ಮೇಲೆ ಬೇಡವೇ ಬೇಡ. ನೋಡುವ ಸಿಕ್ಕೇ ಸಿಗುತ್ತಾಳೆ ನನ್ನ ಮಗನಿಗೆ ದೇವತೆಯಂತಹ ಹುಡುಗಿ...’’ ಲಕ್ಷ್ಮಮ್ಮ ಹೇಳಿದರು.

ಯಾರೂ ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಒಂದೈದು ದಿನ ಹಾಗೂ ಹೀಗೂ ಪಪ್ಪು ಊರಲ್ಲಿ ಕಳೆದ. ಮೇಷ್ಟ್ರಿಗೆ ಬೇಜಾರಾಗಿದೆ ಎನ್ನುವುದು ಗೊತ್ತಾಗಿ ಪದೇ ಪದೇ ಅವರನ್ನು ಸಮಾಧಾನಿಸಲು ಪದ್ಮನಾಭರು ಬರುತ್ತಿದ್ದರು. ಒಂದೆರಡು ಫೋಟೋಗಳನ್ನು ಸುಮ್ಮನೆ ಕಾಟಾಚಾರಕ್ಕೆ ತೋರಿಸುವರು. ‘‘ಈ ಮದುವೆ ನಾನು ನಡೆಸೇ ನಡೆಸುತ್ತೇನೆ. ನೋಡಿ ಮೇಷ್ಟ್ರೇ’’ ಎಂದು ಭರವಸೆ ಹೇಳಿ ಹೋಗುವರು. ಅದೊಂದು ದಿನ ಬೆಳಗ್ಗೆ ಪಪ್ಪು ಎದ್ದವನೇ ಪೆಟ್ಟಿಗೆಯೊಳಗೆ ತನ್ನ ಬಟ್ಟೆಬರೆ ತುರುಕಿಸಿ ‘‘ಅಮ್ಮಾ, ಗಡಿಯಲ್ಲಿ ಯುದ್ಧವಂತೆ. ಯುದ್ಧಕ್ಕೆ ಕರೆ ಬಂದಿದೆ. ನಾನು ಹೊರಡ್ತಾ ಇದ್ದೇನೆ. ಆಶೀರ್ವಾದ ಮಾಡಮ್ಮ...’’ ಎಂದು ಕೂಗಿ ಹೇಳಿದ. ಲಕ್ಷ್ಮಮ್ಮ ದಿಗ್ಮೂಡಳಾಗಿ ಮಗನನ್ನೇ ನೋಡುತ್ತಿದ್ದಳು.

ಪಪ್ಪು ತಾಯಿಯ ಮುಖವನ್ನೂ ನೋಡದೆ, ತಂದೆಗೆ ಒಂದು ಮಾತೂ ಹೇಳದೆ ಮನೆಯಿಂದ ಹೊರಟೇ ಬಿಟ್ಟ.

(ರವಿವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News