ಜಾನುವಾರು ಅಧಿಸೂಚನೆ: 5 ಸಾವಿರ ಕಾರ್ಯಕರ್ತರು ಬಿಜೆಪಿಗೆ ಗುಡ್‌ಬೈ

Update: 2017-06-08 03:45 GMT

ತುರಾ, ಜೂ.8: ಜಾನುವಾರು ಸಂತೆಗಳಲ್ಲಿ ಕಸಾಯಿಖಾನೆಗಳಿಗೆ ಹಸುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಬಿಜೆಪಿಯಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪಕ್ಷದ ನಿಲುವನ್ನು ಖಂಡಿಸಿ ಮೇಘಾಲಯದಲ್ಲಿ ಐದು ಸಾವಿರ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದಿದ್ದಾರೆ.

ಬಿಜೆಪಿ ತುರಾ ಘಟಕದ ಯುವ ಅಧ್ಯಕ್ಷ ವಿಲ್ವರ್ ಗ್ರಹಾಂ ಡಂಗೋ ಸೇರಿದಂತೆ ಹಲವು ಪದಾಧಿಕಾರಿಗಳೂ ಇವರಲ್ಲಿ ಸೇರಿದ್ದು, ಬುಡಕಟ್ಟು ಮತ್ತು ಇತರ ಸಮುದಾಯವನ್ನು ಹತ್ತಿಕ್ಕುವ ಎನ್‌ಡಿಎ ಪ್ರಯತ್ನ ವಿರುದ್ಧ ತೀವ್ರ ಚಳವಳಿ ಹಮ್ಮಿಕೊಳ್ಳುವುದಾಗಿ ಅವರು ಪ್ರಕಟಿಸಿದ್ದಾರೆ.

ಬಿಜೆಪಿ ನಿರ್ಧಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಐದು ಮಂಡಲ ಸಮಿತಿಗಳನ್ನು ವಿಸರ್ಜಿಸಲಾಗಿದೆ. ಐದು ಸಾವಿರಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಪಕ್ಷ ತ್ಯಜಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ನಮ್ಮದೇ ಜನರ ಭಾವನೆಗಳ ಜತೆ ನಾವು ಆಟವಾಡಬಾರದು. ರಾಜಕೀಯದಲ್ಲಿ ಧರ್ಮ ಬೆರೆಸುವ ಬಿಜೆಪಿ ಸಿದ್ಧಾಂತವನ್ನು ನಾವು ವಿರೋಧಿಸುತ್ತೇವೆ. ಜನರ ಭಾವನೆಗಳಿಗೆ ಧಕ್ಕೆ ತರುವ ಪಕ್ಷ ಅಥವಾ ವ್ಯಕ್ತಿಗಳನ್ನು ನಾವು ವಿರೋಧಿಸುತ್ತೇವೆ. ಬುಡಕಟ್ಟು ನೆಲದ ಹಕ್ಕನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಮೇಘಾಲಯದ ಹಿರಿಯ ಬಿಜೆಪಿ ಮುಖಂಡರಾದ ಬಚು ಮಾರಕ್ ಹಾಗೂ ಬರ್ನಾಡ್ ಮಾರಕ್ ಅವರೂ ಪಕ್ಷ ತೊರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News