ಮಹಾರಾಷ್ಟ್ರ:ಮುಷ್ಕರದ ನಡುವೆಯೇ ಆತ್ಮಹತ್ಯೆ ಮಾಡಿಕೊಂಡ ರೈತ

Update: 2017-06-08 11:07 GMT

ಪುಣೆ,ಜೂ.8: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಮುಷ್ಕರದ ನಡುವೆಯೇ ಸಾಲದ ಹೊರೆಯನ್ನು ಹೊತ್ತಿದ್ದ ರೈತನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೊಲ್ಲಾಪುರ ಜಿಲ್ಲೆಯ ಕರ್ಮಲ ತಾಲೂಕಿನ ವೀಟ್ ಗ್ರಾಮದಲ್ಲಿ ಬಧವಾರ ರಾತ್ರಿ ಸಂಭವಿಸಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗ್ರಾಮಕ್ಕೆ ಭೇಟಿ ನೀಡುವವರೆಗೆ ಮತ್ತು ಮುಷ್ಕರ ನಿರತ ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ತನ್ನ ಶವದ ಅಂತ್ಯಸಂಸ್ಕಾರವನ್ನು ನಡೆಸಬಾರದು ಎಂದು ಆತ ತನ್ನ ಆತ್ಮಹತ್ಯಾ ಪತ್ರದಲ್ಲಿ ತಿಳಿಸಿದ್ದಾನೆ.

 ಧನಜಿ ಚಂದ್ರಕಾಂತ ಜಾಧವ(45) ಆತ್ಮಹತ್ಯೆ ಮಾಡಿಕೊಂಡಿರುವ ರೈತ. 2.5 ಎಕರೆ ಭೂಮಿ ಹೊಂದಿದ್ದ ಆತ ಕೃಷಿಗಾಗಿ 60,000 ರೂ.ಗಳ ಸಾಲವನ್ನು ಮಾಡಿದ್ದು, ಖಾಸಗಿ ಲೇವಾದೇವಿದಾರರಿಂದಲೂ ಸಾಲ ಪಡೆದುಕೊಂಡಿದ್ದ ಎನ್ನಲಾಗಿದೆ. ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿರುವ ಜಾಧವ ಕುಟುಂಬದ ಆಧಾರಸ್ತಂಭವಾಗಿದ್ದ.

ಜಿಲ್ಲಾ ಉಸ್ತುವಾರಿ ಸಚಿವ ವಿಜಯ ದೇಶಮುಖ್ ಅವರು ಇಂದು ವೀಟ್ ಗ್ರಾಮಕ್ಕೆ ಭೇಟಿ ನೀಡಿ ಮೃತ ರೈತನ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ರೈತನ ಆತ್ಮಹತ್ಯೆಯಿಂದ ಆಕ್ರೋಶಿತ ರೈತರ ಸಂಘಟನೆಗಳು ಕರ್ಮಲ ತಾಲೂಕಿ ನಾದ್ಯಂತ ರಸ್ತೆ ತಡೆಗಳನ್ನು ನಡೆಸಿ,ಬಂದ್ ಆಚರಿಸಿವೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವೀಟ್ ಗ್ರಾಮಕ್ಕೆ ಹೆಚ್ಚುವರಿ ಪೊಲೀಸರನ್ನು ರವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News