ಜೂ.16ರಿಂದ ಪ್ರತಿದಿನ ಪರಿಷ್ಕೃತ ಪೆಟ್ರೋಲ್,ಡೀಸೆಲ್ ಬೆಲೆ ಜಾರಿ

Update: 2017-06-08 12:13 GMT

ಹೊಸದಿಲ್ಲಿ,ಜೂ.8: ಹೆಚ್ಚಿನ ಶ್ರೀಮಂತ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿಯೂ ಜೂ.16ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗಲಿವೆ.
ದೇಶದಲ್ಲಿರುವ ಸುಮಾರು 58,000 ಪೆಟ್ರೋಲ್ ಪಂಪ್‌ಗಳ ಪೈಕಿ ಶೇ.95ಕ್ಕೂ ಅಧಿಕ ಪಂಪ್‌ಗಳ ಒಡೆತನ ಹೊಂದಿರುವ ಸರಕಾರಿ ಸ್ವಾಮ್ಯದ ಐಒಸಿ,ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಮೇ 1ರಿಂದ ಐದು ನಗರಗಳಲ್ಲಿ ದೈನಂದಿನ ಬೆಲೆ ಪರಿಷ್ಕರಣೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಆರಂಭಿಸಿದ್ದು, ಅದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇಡೀ ದೇಶಕ್ಕೆ ವಿಸ್ತರಿಸಲು ಸರಕಾರವು ನಿರ್ಧರಿಸಿದೆ.

ಈ ಕಂಪನಿಗಳು ಪ್ರಸ್ತುತ 15 ದಿನಗಳ ಹಿಂದಿನ ಸರಾಸರಿ ಜಾಗತಿಕ ಬೆಲೆಗಳು ಮತ್ತು ಕರೆನ್ಸಿ ವಿನಿಮಯ ದರವನ್ನು ಆಧರಿಸಿ ಪ್ರತಿ ತಿಂಗಳ 1 ಮತ್ತು 16ರಂದು ತೈಲಬೆಲೆಗಳನ್ನು ಪರಿಷ್ಕರಿಸುತ್ತಿವೆ.

ಸರಕಾರವು 2010ರಲ್ಲಿ ಪೆಟ್ರೋಲ್ ಮತ್ತು 2014ರಲ್ಲಿ ಡೀಸೆಲ್ ಬೆಲೆಗಳನ್ನು ನಿಯಂತ್ರಣ ಮುಕ್ತಗೊಳಿಸಿದೆ. ತಾಂತ್ರಿಕವಾಗಿ ತೈಲಕಂಪನಿಗಳು ಬೆಲೆಗಳನ್ನು ಪರಿಷ್ಕರಿಸಲು ಸ್ವಾತಂತ್ರವನ್ನು ಹೊಂದಿವೆಯಾದರೂ ರಾಜಕೀಯ ಪರಿಗಣನೆಗಳ ತೊಡಕುಗಳಿವೆ. ಆದರೆ ಬೆಲೆಗಳ ದೈನಂದಿನ ಪರಿಷ್ಕರಣೆಯಿಂದ ಏರಿಕೆ ಪ್ರತಿ ಲೀಟರ್‌ಗೆ ಕೆಲವು ಪೈಸೆಗಳಷ್ಟಾಗಲಿವೆ. ಹೀಗಾಗಿ ಇಂಧನ ಬೆಲೆಗಳಲ್ಲಿ ಹೆಚ್ಚಿನ ಏರಿಕೆ ಮಾಡದಂತೆ ರಾಜಕೀಯ ಒತ್ತಡಗಳು ಮಾಯವಾಗಲಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News