×
Ad

ಬಸ್ ಕಂಡಕ್ಟರ್ ಯೋಗನಾಥನ್ ಸಿಬಿಎಸ್ಸಿ ಪಠ್ಯ ವಿಷಯ ಆಗಿದ್ದು ಹೇಗೆ ಗೊತ್ತೇ ?

Update: 2017-06-09 16:06 IST

ಕೊಯಂಬತ್ತೂರು, ಜೂ. 9 : ನಗರದ ಬಸ್ ಕಂಡಕ್ಟರ್ ಒಬ್ಬರು 38,000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಸಿಬಿಎಸ್ಸಿ ಐದನೇ ತರಗತಿಯ ಸಾಮಾನ್ಯ ಜ್ಞಾನ ಪಠ್ಯ ಪುಸ್ತಕದಲ್ಲಿ ‘ಗ್ರೀನ್ ಕ್ರುಸೇಡರ್’ ಎಂದು ಉಲ್ಲೇಖಗೊಂಡಿದ್ದಾರೆ. ಮರುಧಮಲೈ-ಗಾಂಧೀಪುರಂ 70 ಸಂಖ್ಯೆಯ ಬಸ್ಸಿನ ಕಂಡಕ್ಟರ್ ಆಗಿರುವ ಯೋಗನಾಥನ್ ಅವರೇ ಈ ಅಪರೂಪದ ವ್ಯಕ್ತಿಯಾಗಿದ್ದಾರೆ. ಅವರು ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ 28 ವರ್ಷಗಳಲ್ಲಿ ಅವರು ತಮ್ಮದೇ ಶ್ರಮದಿಂದ 38,000ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ವನ್ಯಜೀವಿ ಸಂರಕ್ಷಣೆಗೆ ಹಾಗೂ ಪ್ರಕೃತಿ ಸಂರಕ್ಷಣೆಯ ಬಗ್ಗೆ ಯುವಜನರಲ್ಲಿ ಅರಿವನ್ನುಂಟು ಮಾಡುವ ಅಭಿನಂದನೀಯ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ಪ್ಲಸ್ ಟು ತೇರ್ಗಡೆಯಾಗಿರುವ ಯೋಗನಾಥನ್ ಅವರು ನಾಗಪಟ್ಟಿಣಂ ತಾಲೂಕಿನ ಮಯಿಲದುತ್ತರೈ ನಿವಾಸಿಯಾಗಿದ್ದು ಶಾಲಾ ಶಿಕ್ಷಣ ಬಳಿಕ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುವಾಗ ನೀಲಗಿರಿ ಬೆಟ್ಟದ ಪ್ರಕೃತಿ ಸೌಂದರ್ಯದಿಂದ ಪ್ರಭಾವಿತರಾಗಿದ್ದರು. ಮರಗಳ ಕಳ್ಳಸಾಗಾಟದ ವಿರುದ್ಧ ಪ್ರತಿಭಟಿಸಿದ್ದ ಅವರು ಮುಂದೆ ಪರಿಸರ ರಕ್ಷಣೆಗಾಗಿ ಪಣತೊಟ್ಟಿದ್ದರು. ಅವರ ಈ ಕಾರ್ಯಕ್ಕೆ ತಮಿಳುನಾಡು ಗೀನ್ ಮೂವ್ಮೆಂಟಿನ ಜಯಚಂದ್ರನ್ ಅವರ ಬೆಂಬಲ ಇದೆ.

ಆರಂಭದಲ್ಲಿ ಟೀ ಎಸ್ಟೇಟ್ ಒಂದರಲ್ಲಿ ದುಡಿಯುತ್ತಿದ್ದ ಯೋಗನಾಥನ್ ಮುಂದೆ ತಮಿಳುನಾಡು ಸಾರಿಗೆ ನಿಗಮದ ಬಸ್ ಕಂಡಕ್ಟರ್ ಹುದ್ದೆಗೆ ಆಯ್ಕೆಯಾಗಿ ಕೊಯಂಬತ್ತೂರಿನಲ್ಲಿ ಸೇವೆ ಸಲ್ಲಿಸಲು ಆರಂಭಿಸಿದರೂ ತಮ್ಮ ಪರಿಸರ ಕಾಳಜಿಯನ್ನು ಮರೆಯಲಿಲ್ಲ. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವನ್ನುಂಟು ಮಾಡುವ ಕಾರ್ಯದಲ್ಲಿ ಕೂಡ ಅವರು ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News