ರಾಜಸ್ಥಾನದ ಹೊಸ ಪಠ್ಯ ಪುಸ್ತಕಗಳಲ್ಲಿ ಗಾಂಧೀಜಿ , ನೆಹರೂರನ್ನು ಬದಿಗೆ ಸರಿಸಿ ಮಿಂಚುತ್ತಿದ್ದಾರೆ ಸಾವರ್ಕರ್ !

Update: 2017-06-09 10:56 GMT

ಜೈಪುರ್ ,ಜೂ.9: ಈ ಬಾರಿ ರಾಜಸ್ಥಾನ ರಾಜ್ಯ ಶಿಕ್ಷಣ ಮಂಡಳಿ ಹೊರತಂದಿರುವ ಹೊಸ ಪಠ್ಯಪುಸ್ತಕಗಳಲ್ಲಿ ಗಾಂಧೀಜಿ, ನೆಹರೂ ಅವರನ್ನು ಬದಿಗೆ ಸರಿಸಿ ಹಿಂದುತ್ವ ನಾಯಕ ವೀರ್ ಸಾವರ್ಕರ್ ಮಿಂಚುತ್ತಿದ್ದಾರೆ.

ಬಿಜೆಪಿ ಆಡಳಿತದಲ್ಲಿನ ಈ ರಾಜ್ಯದ ಒಂದು ಪಠ್ಯಪುಸ್ತಕದಲ್ಲಂತೂ ಕಾಂಗ್ರೆಸ್ ನಾಯಕರನ್ನು ಶ್ರೀಮಂತ ಮನೆತನದ, ಮಧ್ಯಮ ವರ್ಗದ ಬುದ್ಧಿಜೀವಿಗಳು ಹಾಗೂ ದೊಡ್ಡ ನಗರಗಳಿಂದ ಬಂದು ಜನರೊಡನೆ ಸಂಪರ್ಕದಲ್ಲಿಲ್ಲದವರೆಂದು ವರ್ಣಿಸಲಾಗಿದೆ.

ಹತ್ತನೇ, 11 ಹಾಗೂ 12ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಸಮಾನ ನಾಗರಿಕ ಸಂಹಿತೆ, ಪ್ರಧಾನಿ ಮೋದಿಯ ವಿದೇಶಾಂಗ ನೀತಿಗಳು ಮುಖ್ಯವಾಗಿ ಪಾಕಿಸ್ತಾನಕ್ಕೆ ಸಂಬಂಧಪಟ್ಟಂತಹವುಗಳನ್ನು ವಿವರಿಸಲಾಗಿದೆ.

ಆದರೆ ಮುಖ್ಯವಾಗಿ ಗಮನ ಸೆಳೆಯುವಂತಹದ್ದು 10ನೇ ತರಗತಿ ಪಠ್ಯಪುಸ್ತಕವಾಗಿದ್ದು ಇದರಲ್ಲಿ ಸಾವರ್ಕರ್ ಎಷ್ಟೊಂದು ರಾರಾಜಿಸುತ್ತಿದ್ದಾರೆಂದರೆ ಇಲ್ಲ ಗಾಂಧೀಜಿಯ ಒಂದು ಉಲ್ಲೇಖವಿದೆಯಷ್ಟೇ. ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಹಿಂದೂಕರಣಗೊಳಿಸುವುದೇ ಇದರ ಉದ್ದೇಶವೆಂದು ಶಿಕ್ಷಣತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಆದರೆ ಸರಕಾರ ಮಾತ್ರ ತನ್ನನ್ನು ಸಮರ್ಥಿಸಿಕೊಂಡಿದ್ದು ಒಂಬತ್ತನೇ ತರಗತಿ ಪಠ್ಯದಲ್ಲಿ ನೆಹರೂ ಅವರಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದಿದೆ. ಎಲ್ಲಾ ರಾಷ್ಟ್ರನಾಯಕರನ್ನೂ ಎಲ್ಲಾ ಪಠ್ಯಗಳಲ್ಲೂ ಸೇರಿಸಲಾಗದು, ಎಂದು ರಾಜ್ಯ ಶಿಕ್ಷಣ ಸಚಿವ ವಾಸುದೇವ ದೇವ್ನನಿ ಹೇಳಿದ್ದಾರೆ.

ಹತ್ತನೇ ತರಗತಿ ಪಠ್ಯದಲ್ಲಿ ಸಾವರ್ಕರ್ ಅವರನ್ನು ದೊಡ್ಡ ಕ್ರಾಂತಿಕಾರಿ, ದೇಶಭಕ್ತ ಹಾಗೂ ಸಂಘಟನವಾದಿ ವ್ಯಕ್ತಿ ಎಂದು ಬಣ್ಣಿಸಲಾಗಿದೆ. ‘‘ಅವರು ಜೀವನಪರ್ಯಂತ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳು ಮಾತುಗಳಿಗೆ ನಿಲುಕದ್ದು.’’ ಎಂದೂ ಹೇಳಿಕೊಂಡಿದೆ.

ಸರಕಾರದ ನಿರ್ದೇಶನದಂತೆಯೇ ಹೊಸ ಪಠ್ಯಕ್ರಮವನ್ನು ರಚಿಸಲಾಗಿದೆ ಎಂದು ರಾಜಸ್ಥಾನ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ ಅಧ್ಯಕ್ಷ ಬಿ ಎಲ್ ಚೌಧುರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News