ಮೇವು ಹಗರಣ: ವಿಚಾರಣೆಗೆ ಹಾಜರಾದ ಮಿಶ್ರ, ಲಾಲು ಪ್ರಸಾದ್

Update: 2017-06-09 12:06 GMT

ರಾಂಚಿ, ಜೂ.9: ಮೇವು ಹಗರಣದಲ್ಲಿ ಆರೋಪಿಗಳಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲುಪ್ರಸಾದ್ ಯಾದವ್ ಹಾಗೂ ಜಗನ್ನಾಥ್ ಮಿಶ್ರ ರಾಂಚಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದೆದುರು ವಿಚಾರಣೆಗೆ ಹಾಜರಾದರು.

ದಿಯೊಘರ್ ಜಿಲ್ಲಾ ಖಜಾನೆ ಮತ್ತು ದೊರಾಂಡ ರಾಂಚಿ ಖಜಾನೆಯಿಂದ ಅಕ್ರಮವಾಗಿ ಹಣ ಹಿಂಪಡೆದ ಪ್ರಕರಣಗಳಲ್ಲಿ ಲಾಲುಪ್ರಸಾದ್ ವಿರುದ್ಧ ವಿಚಾರಣೆ ನಡೆಯುತ್ತಿದ್ದರೆ ಮಿಶ್ರಾ ದಿಯೊಘರ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ದಿಯೊಘರ್ ಜಿಲ್ಲಾ ಖಜಾನೆಯಿಂದ ಅಕ್ರಮವಾಗಿ 95 ಲಕ್ಷ ರೂ. ಹಿಂಪಡೆದ ಪ್ರಕರಣದಲ್ಲಿ ಲಾಲೂಪ್ರಸಾದ್‌ಗೆ ಸಮನ್ಸ್ ಜಾರಿಯಾಗಿದೆ.

ನ್ಯಾಯಾಂಗದ ಬಗ್ಗೆ ನನಗೆ ಪೂರ್ಣ ನಂಬಿಕೆಯಿದೆ. ಸೂಚಿಸಿದಾಗಲೆಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಲಾಲುಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು. 1990ರಲ್ಲಿ ಲಾಲುಪ್ರಸಾದ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭ 900 ಕೋಟಿ ರೂ. ಮೊತ್ತದ ಮೇವುಹಗರಣ ಬೆಳಕಿಗೆ ಬಂದಿತ್ತು. ಹಗರಣದಲ್ಲಿ ಲಾಲು ವಿರುದ್ದ ಐದು ಪ್ರಕರಣ ದಾಖಲಾಗಿತ್ತು ಮತ್ತು ಒಂದು ಪ್ರಕರಣದಲ್ಲಿ ಐದು ವರ್ಷದ ಜೈಲು ಶಿಕ್ಷೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News