ಮಧ್ಯಪ್ರದೇಶ: ಮುಕ್ತ ಮಾತುಕತೆಗೆ ಸರಕಾರ ಸಿದ್ಧ: ಮುಖ್ಯಮಂತ್ರಿ ಘೋಷಣೆ

Update: 2017-06-09 13:18 GMT

ಮಂದ್‌ಸೋರ್(ಮ.ಪ್ರ), ಜೂ.9 : ರೈತರ ಹಿಂಸಾತ್ಮಕ ಪ್ರತಿಭಟನೆಯಿಂದ ನಲುಗಿದ್ದ ಮಂದ್‌ಸೋರ್ ಮತ್ತು ಪಿಪ್ಲಿಯಾಮಂಡಿ ನಗರಗಳಲ್ಲಿ ಶುಕ್ರವಾರ ಕರ್ಫ್ಯೂ ಸಡಿಲಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆದಿರುವ ವರದಿಯಾಗಿಲ್ಲ . ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಹೊಸ ಪ್ರಯತ್ನ ನಡೆಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ , ಭಿನ್ನಾಭಿಪ್ರಾಯ ದೂರಗೊಳಿಸಲು ಸರಕಾರ ಮಾತುಕತೆಗೆ ಸಿದ್ಧ ಎಂದಿದ್ದು ಶಾಂತಿ ಕಾಪಾಡುವಂತೆ ಜನತೆಗೆ ಕರೆ ನೀಡಿದ್ದಾರೆ.

ಮಂದ್‌ಸೋರ್ ಮತ್ತು ಪಿಪ್ಲಿಯಾಮಂಡಿ ನಗರಗಳಲ್ಲಿ ಅಂಗಡಿ, ಮುಂಗಟ್ಟುಗಳು ತೆರೆದಿದ್ದು ಸ್ಥಳೀಯರು ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಮುಂದಾದರು. ಪೆಟ್ರೋಲ್ ಪಂಪ್ ಎದುರು ಗ್ರಾಹಕರ ಮೈಲುದ್ದದ ಸರತಿ ಸಾಲು ಬೆಳೆದಿತ್ತು.

   ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಆದ್ದರಿಂದ ಕರ್ಫ್ಯೂ ಸಡಿಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಒ.ಪಿ.ಶ್ರೀವಾಸ್ತವ ಹೇಳಿದ್ದಾರೆ. ಈ ಮಧ್ಯೆ ರೈತರ ಪ್ರತಿಭಟನೆ ರಾಜ್ಯದ ಇತರೆಡೆ ಹಬ್ಬಿದ್ದು ಬೆಂಕಿ ಹಚ್ಚುವ ಘಟನೆಗಳು ಗುರುವಾರ ರಾಜ್ಯದ ಪಶ್ಚಿಮ ಭಾಗದ ಜಿಲ್ಲೆಗಳಾದ ಶಾಜಪುರ್ ಮತ್ತು ಧಾರ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಶಾಜಪುರದ ಮಾರುಕಟ್ಟೆಯೊಂದರಲ್ಲಿ ಕಲ್ಲೆಸೆತದಲ್ಲಿ ತೊಡಗಿದ ಗುಂಪೊಂದನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಯಿತು. ಛಿಂದ್ವಾರಾ ಜಿಲ್ಲೆಯಲ್ಲೂ ಪ್ರತಿಭಟನೆ ನಡೆದ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News