ವೈಯಕ್ತಿಕ ಆಸ್ತಿಯಲ್ಲಿ ಸನ್ಯಾಸಿನಿಯರಿಗೆ, ಪಾದ್ರಿಗಳಿಗೆ ಹಕ್ಕಿದೆ: ಕೇರಳ ಹೈಕೋರ್ಟ್ ತೀರ್ಪು

Update: 2017-06-09 13:25 GMT

ಕೊಚ್ಚಿ, ಜೂ.9: ಧಾರ್ಮಿಕ ವರ್ಗಕ್ಕೆ ಸೇರಿದ ಮಾತ್ರಕ್ಕೆ ಕೈಸ್ತ ಪಾದ್ರಿಗಳು ಮತ್ತು ಸನ್ಯಾಸಿನಿಯರಿಗೆ ವೈಯಕ್ತಿಕ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.

ತನಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕನ್ನು ನಿರಾಕರಿಸಿದ ಪ್ರಧಾನ ಉಪನ್ಯಾಯಾಲಯವೊಂದರ ತೀರ್ಪನ್ನು ಪ್ರಶ್ನಿಸಿ ಕ್ರೈಸ್ತ ಪಾದ್ರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿ.ಚಿತಂಬರೇಶ್ ಮತ್ತು ಕೆ.ರಾಮಕೃಷ್ಣನ್ ಅವರಿದ್ದ ಪೀಠವೊಂದು ಈ ತೀರ್ಪು ನೀಡಿದೆ.

 ಕ್ರೈಸ್ತ ಪಾದ್ರಿಗಳು ಅಥವಾ ಸನ್ಯಾಸಿನಿಯರು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವುದಕ್ಕೆ ಯಾವುದೇ ಶಾಸನಾತ್ಮಕ ನಿಬರ್ಂಧವಿಲ್ಲ ಎಂದು ನ್ಯಾಯಾಲಯದ ಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

 ವಕೀಲರು ತಮ್ಮ ಸೇವೆಗೆ ಶುಲ್ಕ ಪಡೆಯವಂತೆ ಪಾದ್ರಿ ಅಥವಾ ಸನ್ಯಾಸಿನಿ ಸಂಬಳ ಪಡೆಯುವ ಯಾವುದೇ ಉದ್ಯೋಗ ನಿರ್ವಹಿಸಲು ಸಮರ್ಥರಿರುವಾಗ , ಉತ್ತರಾಧಿಕಾರ ಅಥವಾ ಹಕ್ಕುದಾರಿಕೆ ವಿಷಯಕ್ಕೆ ಮಾತ್ರ ಅವರನ್ನು ಲೌಕಿಕವಾಗಿ ಮರಣಹೊಂದಿದ್ದಾರೆ ಎಂದು ಪರಿಗಣಿಸುವುದು ಎಷ್ಟು ಸರಿ ಎಂದು ನ್ಯಾಯಪೀಠ ಪ್ರಶ್ನಿಸಿದೆ.

   ಕ್ರೈಸ್ತಪಾದ್ರಿಯಾಗಿರುವ ವ್ಯಕ್ತಿ ತನಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಕೇಳುವುದು ಸರಿಯಲ್ಲ. ಪಾದ್ರಿಯಾಗಿರುವ ಕಾರಣ ಆತ ಲೌಕಿಕವಾಗಿ ಮೃತಪಟ್ಟಂತೆ ಆಗುತ್ತದೆ . ಆದ್ದರಿಂದ ಆತನ ಪಾಲನ್ನು ಉಳಿದವರಿಗೆ ಹಂಚಬೇಕು ಎಂದು ಆತನ ಸಂಬಂಧಿಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಧಾರ್ಮಿಕ ವ್ಯವಸ್ಥೆಯೊಂದರ ನೇತೃತ್ವ ವಹಿಸಿಕೊಂಡ ಮಾತ್ರಕ್ಕೆ ಆ ವ್ಯಕ್ತಿ ಲೌಕಿಕವಾಗಿ ಮೃತಪಟ್ಟಿದ್ದಾನೆ ಎಂದು ಭಾವಿಸುವುದು ಸಂವಿಧಾನದ 300-ಎ ಪರಿಚ್ಛೇದದ ಸಾರಾಸಗಟು ಉಲ್ಲಂಘನೆಯಾಗಿದೆ . ಸಹಜವಾಗಿಯೇ, ಹಿಂದೂ ಮಠಾಧೀಶರು ಅಥವಾ ಕ್ರೈಸ್ತ ಪಾದ್ರಿಗಳು ಸ್ವಇಚ್ಛೆಯಿಂದ ತಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಠ ಅಥವಾ ವಿರಕ್ತಗೃಹಗಳಿಗೆ ದಾನ ಮಾಡಬಹುದು ಎಂದು ವಿಭಾಗೀಯ ಪೀಠ ತೀರ್ಪಿನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News