ಪ್ರತ್ಯೇಕತಾವಾದಿ ಗುಂಪು ಪ್ರೇರಿತ ಹರತಾಳ: ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತ

Update: 2017-06-09 13:58 GMT

ಶ್ರೀನಗರ, ಜೂ.9: ಯುವಕನೋರ್ವನ ಹತ್ಯೆ ವಿರೋಧಿಸಿ ಪ್ರತ್ಯೇಕತಾವಾದಿ ಗುಂಪಿನ ನೇತೃತ್ವದಲ್ಲಿ ನಡೆದ ಹರತಾಳ ಮತ್ತು ಜನರ ಸಂಚಾರಕ್ಕೆ ಅಧಿಕಾರಿಗಳು ವಿಧಿಸಿದ ನಿರ್ಬಂಧದ ಕಾರಣ ಕಾಶ್ಮೀರದ ಹಲವು ಭಾಗಗಳಲ್ಲಿ ಶುಕ್ರವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯಾದ್ಯಂತ ಶಾಲೆ ಮತ್ತು ಕಾಲೇಜುಗಳು ಮುಚ್ಚಿದ್ದು ಹಲವೆಡೆ ಅಂಗಡಿ ಮುಂಗಟ್ಟುಗಳೂ ತೆರೆದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     ರಾಷ್ಟ್ರೀಯ ತನಿಖಾ ಮಂಡಳಿ (ಎನ್‌ಐಎ) ಇತ್ತೀಚೆಗೆ ರಾಜ್ಯದ ಕೆಲವೆಡೆ ದಾಳಿ ನಡೆಸಿ ತನಿಖೆ ನಡೆಸಿರುವುದನ್ನು ಮತ್ತು ಮಂಗಳವಾರ ನಡೆದ ಪ್ರತಿಭಟನೆಯ ಸಂದರ್ಭ ಯುವಕನೋರ್ವ ಭದ್ರತಾ ಪಡೆಗಳ ಗುಂಡಿನ ದಾಳಿಯಿಂದ ಮೃತಪಟ್ಟಿರುವ ಘಟನೆಯನ್ನು ಖಂಡಿಸಿ ಪ್ರತ್ಯೇಕತಾವಾದಿ ಗುಂಪಿನ ನೇತೃತ್ವದಲ್ಲಿ ಹರತಾಳ ಮತ್ತು ಪ್ರತಿಭಟನೆ ನಡೆದಿದೆ. ಶ್ರೀನಗರದ ಕೆಲವು ಭಾಗಗಳಲ್ಲಿ ಮತ್ತು ಶೋಫಿಯಾನ್ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಜನ ಸಂಚಾರಕ್ಕೆ ಅಧಿಕಾರಿಗಳು ನಿರ್ಬಂಧ ಹೇರಿದ್ದರು. ಅಲ್ಲದೆ ಕೇಂದ್ರ ಕಾಶ್ಮೀರದ ಗಂದೇರ್‌ಬಲ್ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.ದಕ್ಷಿಣ ಕಾಶ್ಮೀರದಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

   ಮೃತ ಯುವಕನ ಮನೆಯತ್ತ ಮೆರವಣಿಗೆಯಲ್ಲಿ ಸಾಗುವಂತೆ ದಕ್ಷಿಣ ಕಾಶ್ಮೀರದ ಜನರಿಗೆ ಹುರಿಯತ್ ಕಾನ್ಫರೆನ್ಸ್‌ನ ಉಭಯ ಬಣದ ಮುಖಂಡರಾದ ಸಯ್ಯದ್ ಆಲಿ ಶ ಗೀಲಾನಿ ಮತ್ತು ಮಿರ್‌ವೈಝ್ ಉಮರ್ ಫಾರೂಕ್ ಮತ್ತು ಜೆಕೆಎಲ್‌ಎಫ್ ಮುಖಂಡ ಯಾಸಿನ್ ಮಲಿಕ್ ಕರೆ ನೀಡಿದ್ದರು. ಶ್ರೀನಗರದ ಖಾನ್ಯರ್,ಸಫಕದಲ್,ರೈನಾವರಿ, ಕ್ರೈಖುದ್, ನೌಹಟ್ಟಾ, ಮೈಸುಮ ಪಟ್ಟಣಗಳಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

    ಹರತಾಳದ ಕಾರಣ ಕಣಿವೆಯ ಉಳಿದೆಡೆಯೂ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬಹುತೇಕ ಕಡೆ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು, ಪೆಟ್ರೋಲ್ ಪಂಪ್ ಕಾರ್ಯಾಚರಿಸಲಿಲ್ಲ. ಸರಕಾರಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದು ಕಾಶ್ಮೀರ ವಿವಿ ಶುಕ್ರವಾರ ನಡೆಸಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News