ಜುಲೈಯಿಂದ ತೆರಿಗೆ ರಿಟರ್ನ್ ಸಲ್ಲಿಕೆಗೆ ಆಧಾರ್ ಕಡ್ಡಾಯ

Update: 2017-06-09 17:51 GMT

 ಹೊಸದಿಲ್ಲಿ,ಜೂ.9: ತೆರಿಗೆ ಪಾವತಿದಾರರು ಜುಲೈಯಿಂದ ತಮ್ಮ ತೆರಿಗೆ ರಿಟರ್ನ್‌ಗಳ ಸಲ್ಲಿಕೆಗೆ ತಮ್ಮ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆಯೆಂದು ಸುಪ್ರೀಂಕೋರ್ಟ್ ಶನಿವಾರ ತೀರ್ಪು ನೀಡಿದೆ. ಆದಾಗ್ಯೂ ನಾಗರಿಕರ ಆಧಾರ್ ದತ್ತಾಂಶಗಳು ಸೋರಿಕೆಯಾಗುತ್ತಿವೆಯೆಂಬ ವರದಿಗಳ ಬಗ್ಗೆ ತಾನು ಆತಂಕಗೊಂಡಿರುವುದಾಗಿ ಅದು ಹೇಳಿದೆ. ನ್ಯಾಯಾಲಯದ ಆದೇಶದ ಬಳಿಕ  ಕೇಂದ್ರಸರಕಾರದ ಆಟಾರ್ನಿ ಜನರಲ್ ಸುದ್ದಿಗಾರರ ಜೊತೆ ಮಾತನಾಡಿ, ‘‘ಸುಪ್ರೀಂಕೋರ್ಟ್ ನಮ್ಮ ನಿಲುವನ್ನು ಸಮರ್ಥಿಸಿದೆ’’ ಎಂದು ಹೇಳಿದ್ದಾರೆ. ಪ್ರಸ್ತುತ ದೇಶಾದ್ಯಂತ 110 ಕೋಟಿ ಭಾರತೀಯರು ಆಧಾರ್ ಕಾರ್ಡ್ ಹೊಂದಿದ್ದಾರೆಂದು ಅಂದಾಜಿಸಲಾಗಿದೆ.

   ಕೇಂದ್ರ ಸರಕಾರವು ಈ ವರ್ಷದ ಆರಂಭದಲ್ಲಿ ಜಾರಿಗೊಳಿಸಿದ ಆದೇಶವೊಂದರಲ್ಲಿ ಜುಲೈ ತಿಂಗಳಿಂದ ತೆರಿಗೆ ರಿಟರ್ನ್‌ಗಳ ಸಲ್ಲಿಕೆಗೆ ಹಾಗೂ ಪಾನ್ ಕಾರ್ಡ್ ಅರ್ಜಿ ಸಲ್ಲಿಸಲು ಆಧಾರಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಿತ್ತು. ತೆರಿಗೆಗಳ್ಳತನ ತಪ್ಪಿಸಲು ಪ್ರತಿಯೊಬ್ಬ ಪೌರನ ತೆರಿಗೆ ರಿಟರ್ನ್‌ಗಳನ್ನು ಆತನ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ದತ್ತಾಂಶದ ಜೊತೆ ಸಂಪರ್ಕಿಸುವುದು ಅತ್ಯಗತ್ಯವೆಂದು ಅದು ವಾದಿಸಿತ್ತು.

  ಎಡಪಕ್ಷಗಳು ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಮತ್ತು ಪೌರರ ಖಾಸಗಿತನದ ಹಕ್ಕುಗಳ ಪ್ರತಿಪಾದಕರು ಆಧಾರ್ ಕಾರ್ಡ್ ಬಳಕೆಯು ಸ್ವಯಂಪ್ರೇರಿತವಾಗಿರಬೇಕೇ ಹೊರತು ಕಡ್ಡಾಯವಾಗಿರಕೂಡದು ಎಂದು ವಾದಿಸಿದ್ದರು. ಆದರೆ ಕೇಂದ್ರ ವಿತ್ತ ಸಚಿವ ಅರುಣ್‌ಜೇಟ್ಲಿಯವರು, ತೆರಿಗೆಗಳ್ಳತನವನ್ನು ತಪ್ಪಿಸಲು ಆಧಾರ್ ಅತ್ಯುತ್ತಮ ಅಸ್ತ್ರವೆಂದು ಹೇಳಿದ್ದರು. ಆದರೆ ಕೆಲವರು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಕೇಂದ್ರ ಸರಕಾರವು, ವ್ಯಕ್ತಿಗಳ ಮೇಲೆ ಅಕ್ರಮವಾಗಿ ಕಣ್ಗಾವಲಿರಿಸುವ ಸಾಧ್ಯತೆಯಿದೆಯೆಂದು ವಿರೋಧಿಗಳ ವಾದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News