ವಿಮಾನ ನಿಲ್ದಾಣದ ಬಸ್ ನಲ್ಲಿ ನಿದ್ದೆಗೆ ಜಾರಿ ವಿಮಾನ ತಪ್ಪಿಸಿಕೊಂಡ ಬೆಂಗಳೂರಿನ ಇಂಜಿನಿಯರ್
ಹೊಸದಿಲ್ಲಿ,ಜೂ,10: ಮುಂಬೈ ವಿಮಾನ ನಿಲ್ದಾಣದಲ್ಲಿನ ಬಸ್ ಒಂದರಲ್ಲಿ ನಿದ್ದೆಗೆ ಜಾರಿ ತನ್ನ ವಿಮಾನ ತಪ್ಪಿಸಿಕೊಂಡ ವ್ಯಕ್ತಿಯೊಬ್ಬ ತಾನು ಎರಡು-ಮೂರು ದಿನ ಬಿಡುವಿಲ್ಲದೆ ಕೆಲಸ ಮಾಡಿದ ಪರಿಣಾಮ ಆಯಾಸದಿಂದ ನಿದ್ದೆ ಮಾಡಿ ಬಿಟ್ಟೆ ಎಂದು ಹೇಳಿಕೊಂಡಿದ್ದಾನೆ.
ಜೂನ್ 4ರಂದು ಈ ವ್ಯಕ್ತಿ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ವಿಮಾನ ನಿಲ್ದಾಣದಲ್ಲಿನ ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ಆತನನ್ನು ವಾಹನದ ಚಾಲಕ ಕೂಡ ಗಮನಿಸದೆ ವಾಹನವನ್ನು ರಾತ್ರಿ ಪಾರ್ಕ್ ಮಾಡಿದ್ದ.
ಬೆಂಗಳೂರು ಮೂಲದ ಸಂಸ್ಥೆಯೊಂದರಲ್ಲಿ ಸೌಂಡ್ ಇಂಜಿನಿಯರ್ ಆಗಿರುವ ಈ ವ್ಯಕ್ತಿ ಮುಂಬೈಗೆ ಅಧಿಕೃತ ಕೆಲಸದ ನಿಮಿತ್ತ ಆಗಮಿಸಿದ್ದು ಎರಡು ಮೂರು ದಿನಗಳಿಂದ ಸತತವಾಗಿ ಕೆಲಸ ಮಾಡಿದ್ದರಿಂದ ಹಾಗೂ ಬಸ್ಸಿನ ಕೊನೆಯ ಸೀಟಿನಲ್ಲಿ ಹವಾ ನಿಯಂತ್ರಣದ ಸಮೀಪ ಕುಳಿತಿದ್ದರಿಂದ ನಿದ್ದೆಗೆ ಜಾರಿದೆ ಎಂದು ಹೇಳಿದ್ದಾನೆ.
ವಿಮಾನದಲ್ಲಿ ಟಿಕೆಟ್ ಕಾದಿರಿಸಿದ್ದ ಪ್ರಯಾಣಿಕರೊಬ್ಬರು ನಿಲ್ದಾಣಕ್ಕೆ ಆಗಮಿಸಿದ್ದರೂ ವಿಮಾನ ಹತ್ತಲಿಲ್ಲವೆಂಬುದು ಸಿಬ್ಬಂದಿಯ ಗಮನಕ್ಕೆ ಹೇಗೆ ಬಾರದೆ ಹೋಯಿತು ಎಂಬ ಪ್ರಶ್ನೆ ಎದ್ದಿದೆ. ನಿಯಮದ ಪ್ರಕಾರ ಎಲ್ಲಾ ಪ್ರಯಾಣಿಕರು ವಿಮಾನದಲ್ಲಿದ್ದಾರೆಯೇ ಎಂದು ಪರೀಕ್ಷಿಸಬೇಕಾಗಿದೆಯಾದರೂ ಇಲ್ಲಿ ಆ ನಿಯಮ ಪಾಲಿಸದೇ ಇರುವುದರಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ.
ವಿಮಾನವು ನಿಲ್ದಾಣದಿಂದ ನಿರ್ಗಮಿಸಿ ಆರು ಗಂಟೆಗಳಾದ ನಂತರ ಯಾರೋ ಆತ ಲಾಕ್ ಮಾಡಲ್ಪಟ್ಟ ಬಸ್ಸಿನ ಒಳಗಿನಿಂದ ಕೂಗುತ್ತಿದ್ದುದನ್ನು ಗಮನಿಸಿ ಸಂಬಂಧಿತರಿಗೆ ಸುದ್ದಿ ಮುಟ್ಟಿಸಿದ್ದರು. ಪ್ರಯಾಣಿಕ ನಂತರ ಬೆಳಗ್ಗಿನ ಮೊದಲ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾನೆ.