ಮಂದಸೌರ್ ಗೋಲಿಬಾರ್ ಪ್ರಕರಣ: ಕೇಂದ್ರ ಕೃಷಿ ಸಚಿವರ ಕಾರಿನ ಮೇಲೆ ಮೊಟ್ಟೆ ಎಸೆತ
ಭುವನೇಶ್ವರ್, ಜೂ.10: ಮಧ್ಯಪ್ರದೇಶದ ಮಂದಸೌರ್ ನಲ್ಲಿ ಐವರು ರೈತರು ಪೊಲೀಸರ ಗುಂಡೇಟಿಗೆ ಬಲಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಒಡಿಶಾದಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ರ ಕಾರಿನ ಮೇಲೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿದರು.
ಮಂದಸೌರ್ ನಲ್ಲಿ ರೈತರ ಹತ್ಯೆಯಾಗಿದ್ದರೆ ಇತ್ತ ಬಾಬಾ ರಾಮ್ ದೇವ್ ರೊಂದಿಗೆ ಯೋಗ ಮಾಡುತ್ತಿದ್ದ ರಾಧಾ ಮೋಹನ್ ಸಿಂಗ್ ರೈತರ ಬಗ್ಗೆ ಪ್ರಶ್ನಿಸಿದಾಗ “ಯೋಗ ಮಾಡಲಿ” ಎಂದು ಉತ್ತರಿಸಿದ್ದರು. ಸಚಿವರ ಈ ಹೇಳಿಕೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವರ ಮೇಲೆ ಮೊಟ್ಟೆ ಎಸೆದಿದ್ದರು. ಸಚಿವರ ಕಾರಿನ ಮುಂಭಾಗಕ್ಕೆ ಮೊಟ್ಟೆ ತಾಗಿತ್ತು. ಘಟನೆಗೆ ಸಂಬಂಧಿಸಿ ರಾಜ್ಯ ಅಧ್ಯಕ್ಷ ಲೋಕನಾಥ್ ಮಹಾರತಿ ಸೇರಿದಂತೆ ಐವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.