ಆದಿತ್ಯನಾಥ್ ಗೆ ಕಪ್ಪು ಬಾವುಟ ಪ್ರದರ್ಶನ: "ಗಂಭೀರ ಪ್ರಕರಣ" ಎಂದು ವಿದ್ಯಾರ್ಥಿಗಳಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ
ಲಕ್ನೋ, ಜೂ.10: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಲಕ್ನೋ ಯುನಿವರ್ಸಿಟಿಗೆ ಭೇಟಿ ನೀಡಿದ್ದ ಸಂದರ್ಭ ಕಪ್ಪು ಬಾವುಟ ಪ್ರದರ್ಶಿಸಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ 11 ವಿದ್ಯಾರ್ಥಿಗಳಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, 8 ವಿದ್ಯಾರ್ಥಿಗಳನ್ನು ಲಕ್ನೋ ವಿಶ್ವವಿದ್ಯಾಲಯದಿಂದ ಅಮಾನತುಗೊಳಿಸಲಾಗಿದೆ.
ಇದು ಗಂಭೀರ ಅಪರಾಧ ಪ್ರಕರಣವಾಗಿದ್ದು, ವಿದ್ಯಾರ್ಥಿಗಳು ಜಾಮೀನು ಪಡೆಯಲು ಅರ್ಹರಲ್ಲ ಎಂದು ಹೆಚ್ಚುವರಿ ಮುಖ್ಯ ನ್ಯಾ, ಮ್ಯಾಜಿಸ್ಟ್ರೇಟ್ ಸುನೀಲ್ ಕುಮಾರ್ ಹೇಳಿದ್ದಾರೆ.
ಜೂನ್ 8ರಂದು ಮುಖ್ಯ ನ್ಯಾ. ಮ್ಯಾ. ಸಂಧ್ಯಾ ಶ್ರೀವಾಸ್ತವ 11 ವಿದ್ಯಾರ್ಥಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು. 8 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದ್ದು, ಮುಖ್ಯಮಂತ್ರಿಯ ರಕ್ಷಣಾ ಉಲ್ಲಂಘನೆ ನಡೆಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಎಲ್ಲಾ ರೀತಿಯ ವಿದ್ಯಾರ್ಥಿ ಸವಲತ್ತುಗಳಿಂದ ಹೊರಗಿಡಲಾಗಿದೆ ಎಂದು ಲಕ್ನೋ ವಿವಿ ಹೇಳಿದೆ.
ಲಕ್ನೋ ವಿವಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ರನ್ನು ಆಹ್ವಾನಿಸಲಾಗಿತ್ತು. ಮುಖ್ಯಮಂತ್ರಿ ಆಗಮನದ ವೇಳೆ ಸಮಾಜವಾದಿ ಪಾರ್ಟಿ ಛತ್ರ ಸಭಾ ಹಾಗು ಇತರ ವಿದ್ಯಾರ್ಥಿ ಗುಂಪುಗಳ ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿದ್ದರು.