ಜಾನುವಾರು ಮಾರಾಟ ನಿಯಂತ್ರಣ ನಿಯಮ ತಿದ್ದುಪಡಿಗೆ ಸಿದ್ಧ: ಕೇಂದ್ರ ಸಚಿವ

Update: 2017-06-10 16:20 GMT

ಹೊಸದಿಲ್ಲಿ,ಜೂ.10: ಜಾನುವಾರು ಹತ್ಯೆ ಮತ್ತು ಮಾರಾಟ ನಿಷೇಧ ನಿಯಮವನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಸಮರ್ಪಕವಾಗಿ ಬಿಂಬಿಸಿದ್ದು, ಈ ನಿಯಮವನ್ನು ಪ್ರತಿಷ್ಠೆಯ ವಿಷಯ ಎಂದು ಕೇಂದ್ರ ಸರಕಾರ ಭಾವಿಸಿಲ್ಲ. ಈ ನಿಯಮ ತಿದ್ದುಪಡಿಗೆ ಕೇಂದ್ರ ಸರಕಾರ ಸಿದ್ಧವಿದೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಡಾ ಹರ್ಷವರ್ಧನ್ ತಿಳಿಸಿದ್ದಾರೆ.

ಸ್ಥಾಪಿತ ಹಿತಾಸಕ್ತಿಗಳೆಂದರೆ ಯಾರೆಂಬ ಪ್ರಶ್ನೆಗೆ ಉತ್ತರಿಸದ ಕೇಂದ್ರ ಸಚಿವರು, ಈ ವಿಷಯವನ್ನು ಅನವಶ್ಯಕವಾಗಿ ವಿವಾದವನ್ನಾಗಿ ಮಾಡಲಾಗಿದೆ ಮತ್ತು ತಪ್ಪಾಗಿ ವ್ಯಾಖ್ಯಾನಿಸಿ ಅಸಮರ್ಪಕವಾಗಿ ಬಿಂಬಿಸಲಾಗಿದೆ ಎಂದು ಹೇಳಿದರು.

ಕಸಾಯಿಖಾನೆ ಉದ್ಯಮಕ್ಕೂ ಇದಕ್ಕೂ ಸಂಬಂಧವಿಲ್ಲ. ಜನರ ಆಹಾರ ಪದ್ದತಿಯನ್ನು ಬದಲಿಸುವುದು ಅಥವಾ ಅದರ ಮೇಲೆ ಪ್ರಭಾವ ಬೀರುವ ಯಾವುದೇ ಉದ್ದೇಶ ಈ ನಿಯಮದಲ್ಲಿ ಇಲ್ಲ ಎಂದು ಸಚಿವರು ಹೇಳಿದರು. ಪರಿಸರ ಇಲಾಖೆ ಕಳೆದ ತಿಂಗಳು ಈ ನಿಯಮವನ್ನು ಜಾರಿಗೊಳಿಸಿತ್ತು.

ಜಾನುವಾರು ಹತ್ಯೆ ನಿಷೇಧ ನಿಯಮವನ್ನು ವಿರೋಧಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ.ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಮೇಘಾಲಯದಲ್ಲಿ ಆಡಳಿತಾರೂಢ ಬಿಜೆಪಿಯ ಹಲವು ಮುಖಂಡರು ನಿಯಮಕ್ಕೆ ವಿರೋಧ ಸೂಚಿಸಿ ಪಕ್ಷ ತ್ಯಜಿಸಿದ್ದರು.

ಜಾನುವಾರು ಹತ್ಯೆ ಮತ್ತು ಮಾರಾಟ ನಿಷೇಧಿಸುವ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ನಾಲ್ಕು ವಾರಗಳ ತಡೆಯಾಜ್ಞೆ ವಿಧಿಸಿತ್ತು. ಕೃಷಿ ಮತ್ತು ಹೈನುಗಾರಿಕೆ ಉದ್ದೇಶಕ್ಕೆ ಮಾತ್ರ ಜಾನುವಾರುಗಳ ವ್ಯಾಪಾರ ನಡೆಯಬೇಕು ಎಂಬ ಆದೇಶದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಮುಂದಿನ ವಾರ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

   ತನ್ನ ಸಾಮಾಜಿಕ ನೀತಿಯನ್ನು ನಿರ್ಧರಿಸುವ ಹಕ್ಕು ಸರಕ್ಕಾರಕ್ಕಿದೆ. ಆದರೆ ಜಾನುವಾರು ಹತ್ಯೆ ನಿಷೇಧ ನಿಯಮದಿಂದ ಮಾಂಸ ಉದ್ಯಮಕ್ಕೆ ಹಾನಿಯಾಗುವುದರ ಜೊತೆಗೆ ರೈತರಿಗೂ ಸಮಸ್ಯೆಯಾಗಲಿದೆ . ಹಾಲು ಕೊಡದ ಹಸುಗಳನ್ನು ಮಾರಾಟ ಮಾಡದಿದ್ದರೆ ಹೈನುಗಾರಿಕೆ ಎಂಬುದು ನಷ್ಟದ ಕಾರ್ಯವಾಗಲಿದೆ ಎಂದು ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಇತ್ತೀಚೆಗೆ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News