ಸ್ಥಗಿತಗೊಂಡ ವಿದ್ಯುತ್ ಯೋಜನೆಗಳಿಗೆ ಪುನಶ್ಚೇತನ : ಪಿಯೂಷ್ ಗೋಯಲ್

Update: 2017-06-10 16:56 GMT

ಮುಂಬೈ, ಜೂ.10: ದೇಶದಲ್ಲಿ ವಿವಿಧೆಡೆ ಸ್ಥಗಿತಗೊಂಡಿರುವ ವಿದ್ಯುತ್ ಸ್ಥಾವರಗಳು ಮತ್ತು ಯೋಜನೆಗಳ ಬಗ್ಗೆ ಮರುಪರಿಶೀಲನೆ ನಡೆಸಲು ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

     ಅರ್ಧದಲ್ಲೇ ಸ್ಥಗಿತಗೊಂಡಿರುವ ಯೋಜನೆಗಳನ್ನು ಕಾರ್ಯ ಸಾಧ್ಯಗೊಳಿಸುವ ಬಗ್ಗೆ ಇತ್ತೀಚೆಗೆ ವಿದ್ಯುತ್‌ಶಕ್ತಿ ಇಲಾಖೆ ಮತ್ತು ಆರ್ಥಿಕ ನೆರವು ನೀಡುವ ಸಂಸ್ಥೆಗಳ ನಡುವೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ದೇಶದಲ್ಲಿ ಹಲವು ವಿದ್ಯುತ್ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ಸಮಪರ್ಕವಾಗಿ ಬಳಸಲಾಗುತ್ತಿಲ್ಲ. ಆದ್ದರಿಂದ ಉಷ್ಣ ವಿದ್ಯುತ್ ಸ್ಥಾವರಗಳ ಸುಮಾರು 20,000ದಿಂದ 25,000 ಮೆಗಾವ್ಯಾಟ್‌ನಷ್ಟು ಉತ್ಪಾದನೆ ಬಳಕೆಯಾಗುತ್ತಿಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆದಿದೆ. ಅರ್ಧದಲ್ಲೇ ನಿಂತಿರುವ ವಿದ್ಯುತ್ ಯೋಜನೆಗಳನ್ನು ಪೂರ್ತಿಗೊಳಿಸಲು ಯೋಜನೆಯೊಂದನ್ನು ರೂಪಿಸಲಾಗುವುದು. ‘ಶಕ್ತಿ’ ಎಂದು ಹೆಸರಿಸಲಾಗಿರುವ ಈ ಯೋಜನೆಯಿಂದ ಹಲವು ವಿದ್ಯುತ್ ಯೋಜನೆಗಳಿಗೆ ನೆರವಾಗಲಿದೆ ಎಂದವರು ಹೇಳಿದರು. ಮುಂಬೈಯಲ್ಲಿ ಆಯೋಜಿಸಲಾಗಿರುವ ‘ಶಕ್ತಿ ಶೃಂಗಸಭೆ’ಯ ಸಂದರ್ಭ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.

  ‘ಶಕ್ತಿ’ ಯೋಜನೆಯ ನೆರವು ಪಡೆದೂ ಪುನಶ್ಚೇತನ ಕಾಣದ ವಿದ್ಯುತ್ ಯೋಜನೆಗಳಿಗೆ ಬ್ಯಾಂಕ್‌ಗಳು, ರಾಷ್ಟ್ರೀಯ ಬಳಕೆದಾರರ ಸಂಸ್ಥೆಗಳು ಮತ್ತು ಆರ್ಥಿಕ ಸಂಸ್ಥೆಗಳ ನೆರವು ಪಡೆಯುವ ಒಂದು ಸಮಗ್ರ ಪರಿಹಾರಸೂತ್ರವನ್ನು ರೂಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News