ಈಶ್ವರಪ್ಪ-ರಾಯಣ್ಣ ಬ್ರಿಗೇಡ್ ಒಟ್ಟು ಸೇರಿದರೆ ಅದು ಲೋಪ ಸಂಧಿ!

Update: 2017-06-10 18:10 GMT

ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸವರ್ಣ ದೀರ್ಘ ಸಂಧಿ’, ‘ಲೋಪ ಸಂಧಿ’, ‘ಗುಣ ಸಂಧಿ’ಗಳ ಕುರಿತಂತೆ ಪಾಠ ಮಾಡಿರುವುದು ಕೇಳಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನ ಗೊಂಡ. ನಮ್ಮ ನಾಯಕರಿಗೆ ಕನ್ನಡ ವ್ಯಾಕರಣಗೊತ್ತಿದೆ ಎನ್ನುವುದೇ ಅವನ ಪಾಲಿಗೆ ಅವತ್ತಿನ ಲೀಡ್ ಸುದ್ದಿಯಾಗಿತ್ತು. ಸರಿ, ಯಾವ್ಯಾವ ನಾಯಕರಿಗೆ ಎಷ್ಟೆಷ್ಟು ವ್ಯಾಕರಣಗೊತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಎಂಜಲು ಕಾಸಿ ಇಂಟರ್ಯೂಗೆ ಹೊರಟ. ಮೊದಲು ಅವನಿಗೆ ನೆನಪಾದುದು ಯಡಿಯೂರಪ್ಪ. ಸೀದ ಅವರ ಮನೆಯ ಬಾಗಿಲು ತಟ್ಟಿದ.

‘‘ಏನ್ರೀ ಅಕಾಲದಲ್ಲಿ ಬಂದು ಬಾಗಿಲು ತಟ್ಟುತ್ತಾ ಇದ್ದೀರಾ?’’ ಯಡಿಯೂರಪ್ಪರಿಗೆ ಕಾಸಿಯನ್ನು ನೋಡಿ ಸಿಟ್ಟು ತಲೆಗೇರಿತ್ತು.

‘‘ಸಾರ್, ಕನ್ನಡ ವ್ಯಾಕರಣಗಳ ಬಗ್ಗೆ ನಿಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವುದಿತ್ತು’’ ಕಾಸಿ ಹಲ್ಲು ಕಿರಿಯುತ್ತಲೇ ಕೇಳಿದ.

ಪತ್ರಕರ್ತರನ್ನು ಇತ್ತೀಚೆಗೆ ಕಂಡರೆ ಯಡಿಯೂರಪ್ಪರಿಗೆ ಆಗುತ್ತಿರಲಿಲ್ಲ. ‘‘ಸರಿ, ಅಲ್ಲೇ ಬಾಗಿಲಲ್ಲೇ ನಿಂತು ಏನು ಕೇಳುವುದಕ್ಕಿದೆಯೋ ಕೇಳಿ’’ ಎಂದರು.

‘‘ಸರ್, ಸಂಧಿ ಎಂದರೆ ಏನು?’’

‘‘ಸಂಧಿ ಎಂದರೆ ಬಿಜೆಪಿಯೋರಿಗೆ ಯಾರೂ ಕಲಿಸಬೇಕಾಗಿಲ್ಲ. ಹಲವು ಸಂಧಾನಗಳನ್ನು ಮಾಡಿ ಮಾಡಿ ನಮಗೆ ಸಂಧಿ ಎನ್ನೋದು ಚೆನ್ನಾಗಿ ಗೊತ್ತಿದೆ’’ ಯಡಿಯೂರಪ್ಪ ಹೇಳಿದರು.

‘‘ಲೋಪ ಸಂಧಿ ಎಂದರೆ ಏನು ಸರ್? ಒಂದು ಉದಾಹರಣೆ ಕೊಡಿ...’’ ಕಾಸಿ ಮತ್ತೆ ಕೇಳಿದ.

‘‘ನೋಡ್ರಿ ಈಶ್ವರಪ್ಪ ಮತ್ತು ರಾಯಣ್ಣ ಬ್ರಿಗೇಡ್ ಒಟ್ಟು ಸೇರಿದರೆ ಅದು ಲೋಪ ಸಂಧಿ...’’

‘‘ಹಾಗಾದರೆ ಗುಣ ಸಂಧಿ...’’

ಯಡಿಯೂರಪ್ಪ ಈಗ ತುಸು ನಿರಾಳರಾಗಿ ಹಸನ್ಮುಖರಾದರು. ‘‘ಅಲ್ಲೇನು ನಿಂತಿದ್ದೀರಾ ? ಬನ್ರೀ ಒಳಗೆ...’’ ಎಂದು ಕಾಸಿಯನ್ನು ಒಳಗೆ ಕರೆಸಿಕೊಂಡರು.

ಕಾಸಿ ಒಳ ಹೋಗಿ, ಕುರ್ಚಿಯಲ್ಲಿ ಕೂತು ಕೇಳಿದ ‘‘ಸಾರ್ ಗುಣ ಸಂಧಿ...’’

‘‘ನಾನು ಮತ್ತು ಕರಂದ್ಲಾಜೆಯವರು ವೇದಿಕೆಯಲ್ಲಿ ಜೊತೆಯಾಗಿದ್ದರೆ ಬಿಜೆಪಿಯ ಪಾಲಿಗೆ ಗುಣ ಸಂಧಿ...’’ ಎಂದು ನಾಚಿದರು.

‘‘ಆಗಮ ಸಂಧಿ ಎಂದರೆ?’’ ಕಾಸಿ ಇನ್ನಷ್ಟು ಕುತೂಹಲದಿಂದ ಕೇಳಿದ.

‘‘ನೋಡ್ರಿ ಕಾಂಗ್ರೆಸ್‌ನಿಂದ ಹಿರಿಯ ತಲೆಗಳೆಲ್ಲ ಬಿಜೆಪಿಯ ಕಡೆಗೆ ಬಂದರೆ ಅದನ್ನು ನಾವು ಆಗಮ ಸಂಧಿ ಎಂದು ಕರೆಯುತ್ತೇವೆ’’ ಯಡಿಯೂರಪ್ಪ ಥಟ್ ಎಂದು ಉತ್ತರಿಸಿದರು.

‘‘ಸರ್ ಆದೇಶ ಸಂಧಿ...’’

‘‘ನಾನು ಬಿಜೆಪಿಯ ಮುಖಂಡರಿಗೆ ನೀಡುವ ಸಲಹೆಗಳೆಲ್ಲ ಆದೇಶ ಸಂಧಿಯಲ್ಲಿ ಬರುತ್ತವೆ. ಅದನ್ನು ಪಾಲಿಸದೇ ಇದ್ದಾಗ ಅದು ಲೋಪಸಂಧಿಯಾಗುತ್ತದೆ’’ ಎಂದು ಮೀಸೆ ತಿರುವಿಕೊಂಡರು.

‘‘ವೃದ್ಧಿ ಸಂಧಿ ಎಂದರೆ ಏನಿರಬಹುದು ಸಾರ್?’’ ಕಾಸಿ ಮತ್ತಷ್ಟು ಕೇಳಿದ.

‘‘ನಮ್ಮ ಅಕ್ರಮ ಆಸ್ತಿ ಹೆಚ್ಚುತ್ತಾ ಹೋದರೆ ಅದು ವೃದ್ಧಿ ಸಂಧಿ’’

‘‘ಯಣ್ ಸಂಧಿ ಎಂದರೆ ಏನು ಸಾರ್?’’ ಕಾಸಿ ಇನ್ನಷ್ಟು ಪ್ರಶ್ನೆ ಇಟ್ಟ.

ಈಗ ಯಡಿಯೂರಪ್ಪರಿಗೇನೋ ಅನುಮಾನ ಬಂತು ‘‘ಅಲ್ರೀ...ಅದು ಯೆಣ್ ಸಂಧಿಯಲ್ಲ, ಹೆಣ್ ಸಂಧಿಯಾಗಿರಬೇಕು...ಸರಿ ನೋಡಿ...’’

‘‘ಇಲ್ಲ ಸಾರ್...ಯಣ್ ಸಂಧಿ...’’ ಕಾಸಿ ಮತ್ತೆ ಸ್ಪಷ್ಟನೆ ನೀಡಿದ.

‘‘ನೋಡ್ರಿ...ಹೆಣ್ಮಕ್ಕಳಿಗೆ ಸಂಬಂಧಿಸಿದ ವಿಷಯ. ನಾನು ಅದರಲ್ಲಿ ಹಸ್ತಕ್ಷೇಪ ಮಾಡಿದರೆ ವಿರೋಧಪಕ್ಷದವರು ಏನೇನೆಲ್ಲ ಕತೆಕಟ್ಟಿ ಆಡ್ತಾರೆ. ನೀವು ನೇರವಾಗಿ ಅದರ ಬಗ್ಗೆ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರಿದ್ದಾರೆ. ಅವರಲ್ಲಿ ವಿಚಾರಿಸಿದರೆ ಮಾಹಿತಿ ಸಿಗಬಹುದು...’’ ಯಡಿಯೂರಪ್ಪ ಮೆಲ್ಲಗೆ ಜಾರಿಕೊಂಡರು.

‘‘ಸರ್, ಮಳೆಗಾಲ ಇದು ಯಾವ ಸಂಧಿ...?’’

‘‘ನೆರೆ ಪರಿಹಾರ ಧನ ಹಂಚಿಕೆಯ ಸಂಧಿ ಕಣ್ರೀ..’’

‘‘ದೇವಾಲಯ ಇದು ಯಾವ ಸಂಧಿ ಸಾರ್?’’ ಕಾಸಿ ಇನ್ನಷ್ಟು ಆಸಕ್ತಿಯಿಂದ ಕೇಳಿದ.

‘‘ಇದು ಚುನಾವಣೆ ಘೋಷಣೆಯ ಸಂಧಿ ಕಣ್ರೀ...’’ ಯಡಿಯೂರಪ್ಪ ಸರಾಗವಾಗಿ ಹೇಳಿದರು. ಕಾಸಿಗೋ ಸಂತೋಷವೋ ಸಂತೋಷ. ಯಾಕೆಂದರೆ ಆತನಿಗೆ ಈ ವ್ಯಾಕರಣದ ಬಗ್ಗೆ ಹೆಚ್ಚು ಮಾಹಿತಿಯೇ ಇದ್ದಿರಲಿಲ್ಲ. ನಮ್ಮ ರಾಜಕಾರಣಿಗಳು ಕನ್ನಡದಲ್ಲಿ ಅದೆಷ್ಟು ಪಾಂಡಿತ್ಯವನ್ನು ಮೆರೆದಿದ್ದಾರೆ ಎಂದು ಆತ ಅಚ್ಚರಿಗೊಳ್ಳುತ್ತಾ ನೇರವಾಗಿ ಬಿಜೆಪಿ ಮುಖಂಡ ಈಶ್ವರಪ್ಪ ಬಳಿ ಓಡಿ ಕೇಳಿದ ‘‘ಸಾರ್ ಸಂಧಿಗಳ ಬಗ್ಗೆ ...’’

ಈಶ್ವರಪ್ಪ ಒಮ್ಮೆಲೆ ಘರ್ಜಿಸಿದರು ‘‘ನೋಡ್ರಿ...ಕನ್ನಡದ ಸಂಧಿಗಂಧಿಗಳಲ್ಲಿ ನಾನು ಓಡಾಡಿದ್ದೇನೆ...ಈ ಸಿದ್ದರಾಮಯ್ಯ ಅವರಿಗೆ ಗೊತ್ತಿರುವುದಕ್ಕಿಂತ ಎಷ್ಟೋ ಸಂಧಿಗಳು ನನಗೆ ಗೊತ್ತಿವೆ. ಯಡಿಯೂರಪ್ಪರಲ್ಲಿ ಬೇಕಾದರೂ ಕೇಳಿ.’’

‘‘ಸಾರ್...ಆದ್ರೂ...ವ್ಯಾಕರಣಗಳ ಬಗ್ಗೆ ಸದನದಲ್ಲಿ...’’ ಕಾಸಿ ಏನೋ ಕೇಳಬೇಕೆನ್ನುವಷ್ಟರಲ್ಲಿ ಈಶ್ವರಪ್ಪ ಇನ್ನೂ ಜೋರಾಗಿ ಅರಚಿದರು ‘‘ನೋಡ್ರಿ...ಸದನದಲ್ಲಿ ವ್ಯಾಕರಣಗಳ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಸಿದ್ದರಾಮಯ್ಯ ಅವರು ವಿರೋಧ ಪಕ್ಷವನ್ನು ಬೆದರಿಸುತ್ತಾ ಇದ್ದಾರೆ. ಈಗಾಗಲೇ ಸದನದಲ್ಲಿ ಶಾಸಕರು ಗೈರು ಹಾಜರಾಗುತ್ತಿದ್ದಾರೆ. ಹೀಗೆ ವ್ಯಾಕರಣಗಳ ಪ್ರಶ್ನೆಗಳನ್ನು ಕೇಳಿದರೆ ಇನ್ನಷ್ಟು ಮಂದಿ ಗೈರು ಹಾಜರಾಗುತ್ತಾರೆ. ವಿರೋಧ ಪಕ್ಷದ ಬಾಯಿ ಮುಚ್ಚಿಸುವುದಕ್ಕಾಗಿಯೇ ಅವರು ಕನ್ನಡ ವ್ಯಾಕರಣಗಳನ್ನು ಕೇಳುತ್ತಿದ್ದಾರೆ. ...’’

‘‘ನಿಮಗೆ ಸಂಧಿಯ ಬಗ್ಗೆ ಗೊತ್ತಾ ಸಾರ್?’’

‘‘ನನಗೆ ಗೊತ್ತು. ಆದ್ರೆ...ಉಳಿದ ಶಾಸಕರೆಲ್ಲ ಎಲ್ಲಿ ಸಂಧಿ, ಸಮಾಸಗಳ ಪ್ರಶ್ನೆ ಕೇಳುತ್ತಾರೋ ಎಂದು ಸದನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ...’’

‘‘ಲೋಪ ಸಂಧಿ ಎಂದರೆ ಏನು ಸಾರ್?’’

‘‘ನೋಡ್ರಿ ಕಾಂಗ್ರೆಸ್ ಈ ರಾಜ್ಯದ ಲೋಪ ಸಂಧಿ...ಬಿಜೆಪಿ ಗುಣ ಸಂಧಿ, ಯಡಿಯೂರಪ್ಪ ಮತ್ತು ನಮ್ಮ ಜಗಳ ಸವರ್ಣ ದೀರ್ಘ ಸಂಧಿ...ಯಾಕೆಂದರೆ ಇದು ಸದ್ಯಕ್ಕಂತೂ ನಿಲ್ಲುವುದಿಲ್ಲ...ನನ್ನ ಹೋರಾಟ ದೀರ್ಘ ಕಾಲ ಮುಂದುವರಿಯುತ್ತದೆ...’’ ಈಶ್ವರಪ್ಪ ಹೇಳುತ್ತಲೇ ಹೋದರು.

ಇದು ಸರಿಯಾಗಲಿಲ್ಲ ಎಂದು ಕಾಸಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೋಗಿ ಕೇಳಿದ ‘‘ಸಾರ್ ಈ ವ್ಯಾಕರಣವನ್ನು ನೀವು ಎಲ್ಲಿ ಕಲಿತಿರೋದು...’’

ಸಿದ್ದರಾಮಯ್ಯ ಅವರು ನಿದ್ದೆಗಣ್ಣಲ್ಲೇ ಹೇಳಿದರು ‘‘ನಿವಾಸದಿಂದ ಬರುವಾಗ ನನ್ನ ಭಾಷಣದ ಪುಸ್ತಕವೆಂದು ಮೊಮ್ಮಕ್ಕಳ ಕನ್ನಡ ಪುಸ್ತಕ ಎತ್ಕೊಂಡು ಬಂದಿದ್ದೆ. ಸದನದಲ್ಲಿ ಪುಸ್ತಕ ಬಿಡಿಸಿದಾಗಲೇ ಗೊತ್ತಾದದ್ದು ಅದು ಕನ್ನಡ ವ್ಯಾಕರಣ ಪುಸ್ತಕ ಅಂತ. ಸರಿ ಅಂತ ಅದನ್ನೇ ಓದಿ ಬಿಟ್ಟೆ? ಬಿಜೆಪಿಯೋರು ಬಾಯಿ ಮುಚ್ಚಿ ಕೂತರು. ಕನ್ನಡ ವ್ಯಾಕರಣಗಳಿಗೆ ಇಷ್ಟು ಶಕ್ತಿ ಇದೆ ಎಂದು ನನಗೆ ಇದೇ ಮೊದಲು ಗೊತ್ತಾಗಿರೋದು...’’ ಎಂದದ್ದೇ ‘ಸಿರಿಗನ್ನಡಂ ಗೆಲ್ಗೆ’ ಎನ್ನುತ್ತಾ ಕಾಸಿ ಅಲ್ಲಿಂದ ಅದೃಶ್ಯವಾದ.

Similar News