ನಿಧಾನಗತಿಯ ನೆನಪು - 'ನೂರೊಂದು ನೆನಪು'

Update: 2017-06-11 08:57 GMT

ಮರಾಠಿ ಲೇಖಕ ಸುಹಾಸ್ ಶಿರ್ವಾಲ್ಕರ್ ಅವರ ‘ದುನಿಯಾದಾರಿ’ ಕೃತಿಯನ್ನು ಆಧರಿಸಿದ ಸಿನೆಮಾ ‘ನೂರೊಂದು ನೆನಪು’. ಈ ಕೃತಿಯನ್ನು ಆಧರಿಸಿ ಅದೇ ಶೀರ್ಷಿಕೆಯಡಿ ಮರಾಠಿ ಚಿತ್ರವೂ ತಯಾರಾಗಿದೆ. ಹಾಗಾಗಿ ನೂರೊಂದು ನೆನಪು’ ಸಿನೆಮಾ ನಿರ್ದೇಶಕರಿಗೆ ಕಾದಂಬರಿಯನ್ನು ತೆರೆಗೆ ಅಳವಡಿಸುವ ಸವಾಲೇನೂ ಎದುರಾಗಿಲ್ಲ. ಮರಾಠಿ ಚಿತ್ರಕಥೆಯನ್ನು ಇಲ್ಲಿನ ನೇಟಿವಿಟಿಗೆ ಹೊಂದುವಂತೆ ಕೊಂಚ ಮಾರ್ಪಾಡು ಮಾಡಿಕೊಂಡು ಸಿನೆಮಾ ಮಾಡಿದ್ದಾರೆ. ಆದರೆ ಒಂದೊಳ್ಳೆ ಕತೆಯನ್ನು ತೆರೆಗೆ ಅಳವಡಿಸುವಲ್ಲಿ ನಿರ್ದೇಶಕರು ಭಾಗಶಃ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.

ಇದು 80ರ ದಶಕದ ಕತೆ. ಆ ಕಾಲಘಟ್ಟಕ್ಕೆ ಹೊಂದುವಂತಹ ಕಾಸ್ಟ್ಯೂಮ್, ಕಟ್ಟಡಗಳು, ಸೆಟ್‌ಗಳನ್ನು ಹಾಕಿ ಚಿತ್ರಿಸಲಾಗಿದೆ. ನಟರು ಬೆಲ್ ಬಾಟಮ್ ಪ್ಯಾಂಟ್‌ನೊಂದಿಗೆ ಗಮನ ಸೆಳೆದರೆ ನಟಿಯರ ಚಿತ್ರವಿಚಿತ್ರ ಹೇರ್‌ಸ್ಟೈಲ್ ಆ ದಿನಗಳನ್ನು ನೆನಪಿಸುತ್ತವೆ. ನಸುಗೆಂಪು ಬೆಳಕಿನ ಕ್ಲಬ್ ಸನ್ನಿವೇಶಗಳಲ್ಲಿನ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿವೆ. ಹಳೆಯ ದಿನಗಳನ್ನು ನೆನಪಿಸುವ ಸಿನೆಮಾದಲ್ಲಿ ನಿರ್ದೇಶಕರು ಫ್ಲಾಶ್‌ಬ್ಯಾಕ್ ತಂತ್ರವನ್ನೂ ತಂದಿದ್ದಾರೆ. ನಟ-ನಟಿಯರೆಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನೆಮಾದಲ್ಲಿ ಎಲ್ಲವೂ ಇದ್ದರೂ ಏನೋ ಮಿಸ್ಸಾಗಿದೆ ಎನಿಸುತ್ತದೆ.

ಕಾದಂಬರಿ ಆಧರಿಸಿದ ಸಿನೆಮಾಗಳು ನಿರ್ದೇಶಕನಲ್ಲಿ ಅಪಾರ ನೈಪುಣ್ಯತೆ ಬೇಡುತ್ತವೆ. ಅನುಭವಿ ನಿರ್ದೇಶಕನಾದರೆ ಕಾದಂಬರಿಯ ವಿಸ್ತಾರವಾದ ಕತೆಯನ್ನು ಒಂದು ಚೌಕಟ್ಟಿಗೆ ತರುತ್ತಾರೆ. ತೆರೆಗೆ ಅಳವಡಿಸಬಹುದಾದ ಸನ್ನಿವೇಶಗಳ ಸ್ಪಷ್ಟ ಚಿತ್ರಣ ಅವರಿಗಿರುತ್ತದೆ. ಅನಗತ್ಯವೆನಿಸುವ ತಿರುವುಗಳಿಂದ ಸಿನೆಮಾವನ್ನು ಲಂಬಿಸುವುದಿಲ್ಲ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕಾದಂಬರಿ ವಸ್ತುಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ತೆರೆಗೆ ತಂದಿದ್ದರು.

ಭಾವಾಭಿವ್ಯಕ್ತಿಗೆ ಸರಿಯಾದ ಹಿನ್ನೆಲೆ ಸಂಗೀತ, ನೆರಳು-ಬೆಳಕಿನ ಆಕರ್ಷಕ ಛಾಯಾಗ್ರಹಣದೊಂದಿಗೆ ಪ್ರೇಕ್ಷಕರನ್ನು ಒಳಗೊಳ್ಳುತ್ತಿದ್ದರು. ಮತ್ತೊಂದೆಡೆ ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಸಿನೆಮಾಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಣ್ಣ ಕತೆಯೊಂದು ಸ್ಫೂರ್ತಿಯಾ ಗಿತ್ತು. ನಿರ್ದೇಶಕ ಸಿದ್ದಲಿಂಗಯ್ಯ ಸಣ್ಣ ಕತೆಯನ್ನು ಅತ್ಯುತ್ತಮ ಚಿತ್ರಕಥೆಯೊಂದಿಗೆ ಅಪೂರ್ವ ಸಿನೆಮಾ ಆಗಿಸಿದ್ದರು. ಹೀಗೆ ಕಾದಂಬರಿ ವಸ್ತುಗಳು ನಿಪುಣ ನಿರ್ದೇಶಕರ ಕೈಗೆ ಸಿಕ್ಕಾಗಲೆಲ್ಲಾ ಯಶಸ್ವಿಯಾಗಿವೆ.

‘ನೂರೊಂದು ನೆನಪು’ ಸಿನೆಮಾದಲ್ಲಿ ನಿರ್ದೇಶಕರ ಅನುಭವದ ಕೊರತೆ ಎದ್ದು ಕಾಣುತ್ತದೆ. ಚಿತ್ರದಲ್ಲಿರುವ ಉಪಕತೆಗಳು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸುತ್ತವೆ. ಪ್ರಮುಖವಾದ ಎರಡು ಲವ್ ಟ್ರ್ಯಾಕ್ ಜೊತೆಗೆ ಮತ್ತೆ ಮೂರ್ನಾಲ್ಕು ಕತೆಗಳು ಚಿತ್ರಕಥೆಗೆ ಭಾರವಾಗಿವೆ. ಪಾತ್ರಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಕತೆ ಕವಲುದಾರಿಯಲ್ಲಿ ಸಾಗುತ್ತದೆ. ಅಲ್ಲದೆ ಸನ್ನಿವೇಶಗಳ ಹೆಣಿಗೆಯಲ್ಲಿಯೂ ನಿರ್ದೇಶಕರು ನೈಪುಣ್ಯತೆ ಸಾಧಿಸಿಲ್ಲ. ಬಿಡಿಬಿಡಿಯಾಗಿ ಇಷ್ಟವಾಗುವ ಕೆಲವು ಸನ್ನಿವೇಶಗಳು ಸಿನೆಮಾದ ಭಾಗವಾಗುವಲ್ಲಿ ಸೋತಿವೆ. ಇದರಿಂದ ಕತೆಯ ಓಘಕ್ಕೆ ಅಡ್ಡಿಯಾಗುತ್ತದೆ.

ನಟನೆಯ ವಿಷಯಕ್ಕೆ ಬಂದರೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚೇತನ್, ರಾಜವರ್ಧನ್ ಮತ್ತು ಮೇಘನಾ ರಾಜ್ ಸೊಗಸಾಗಿ ನಟಿಸಿದ್ದಾರೆ. ಹಿಂದೆ ತಮ್ಮ ಚೊಚ್ಚಲ ಸಿನೆಮಾ ‘ಆ ದಿನಗಳು’ನಲ್ಲಿ ಕಾಣಿಸಿಕೊಂಡಿದ್ದ 80ರ ದಶಕದ ಗೆಟಪ್‌ನ ಚೇತನ್ ಇಲ್ಲಿ ಮತ್ತೆ ಕಾಣಸಿಗುತ್ತಾರೆ. ಇನ್ನು ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.

ಖಳ ಪಾತ್ರದಲ್ಲಿ ಯಶ್ ಶೆಟ್ಟಿ ವಿಚಿತ್ರ ಮ್ಯಾನರಿಸಂನಲ್ಲಿ ಗಮನ ಸೆಳೆಯುತ್ತಾರೆ. ವಿಜಯ್ ಪ್ರಕಾಶ್ ಹಾಡಿರುವ ‘ಬಾರೋ ಬಾರೋ ಗೆಳೆಯ’ ಗುನುಗುವಂತಿದ್ದು, ಛಾಯಾಗ್ರಹಣವೂ ಅಚ್ಚುಕಟ್ಟಾಗಿದೆ. ಒಂದೊಳ್ಳೆಯ ಕತೆ ಮತ್ತು ಯುವ ಪ್ರತಿಭೆಗಳ ಸಂಗಮ ಇಲ್ಲಿದೆ. ನಿಧಾನಗತಿಯ ನಿರೂಪಣೆ ಸಹಿಸಿಕೊಳ್ಳುವ ತಾಳ್ಮೆಯಿದ್ದಲ್ಲಿ ಕುಟುಂಬ ಸಮೇತ ನೋಡಬಹುದಾದ ಸಿನೆಮಾ.

ನಿರ್ದೇಶನ: ಕುಮರೇಶ್ ಎಂ, ನಿರ್ಮಾಣ: ಸೂರಜ್ ದೇಸಾಯಿ ಮತ್ತು ಮನೀಶ್ ದೇಸಾಯಿ, ಸಂಗೀತ: ಗಗನ್ ಬಡೇರಿಯಾ, ಛಾಯಾಗ್ರಾಹಕ: ಎಸ್.ಕೆ.ರಾವ್, ತಾರಾಗಣ: ಚೇತನ್ ಕುಮಾರ್, ಮೇಘನಾ ರಾಜ್, ರಾಜ ವರ್ಧನ್, ಸುಷ್ಮಿತಾ ಜೋಷಿ, ರಾಜೇಶ್ ನಟರಂಗ ಮತ್ತಿತರರು.
 

ರೇಟಿಂಗ್ - ** 1/3

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News