ಪೆಟ್ರೋಲಿಯಂ ಡೀಲರ್‌ಗಳ ಸಂಘದಿಂದ ಜೂ.16ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ
ಹೊಸದಿಲ್ಲಿ, ಜೂ.11: ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಪ್ರತೀ ದಿನ ಪರಿಷ್ಕರಿಸುವ ಸಂಬಂಧದ ಸಮಸ್ಯೆಗಳನ್ನು ಇತ್ಯರ್ಥಪಡಿಸದಿದ್ದಲ್ಲಿ, ಈ ತಿಂಗಳ 16ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಪೆಟ್ರೋಲಿಯಂ ಡೀಲರ್‌ಗಳ ಸಂಘ ಎಚ್ಚರಿಕೆ ನೀಡಿದೆ.
ಇಂಡಿಯನ್ ಆಯಿಲ್, ಭಾರತ್ ಕಾರ್ಪೊರೇಷ್, ಹಿಂದೂಸ್ತಾನ್ ಪೆಟ್ರೋಲಿಯಂ ಹೀಗೆ ಸರ್ಕಾರಿ ಸ್ವಾಮ್ಯದ ಎಲ್ಲ ತೈಲ ಕಂಪೆನಿಗಳು, ದೇಶಾದ್ಯಂತ ದೈನಿಕ ದರ ಪರಿಷ್ಕರಣೆಯ ಹೊಸ ವ್ಯವಸ್ಥೆಯನ್ನು ಆರಂಭಿಸುವುದಾಗಿ ಜೂ.8ರಂದು ಪ್ರಕಟಿಸಿದ್ದವು. ಆದರೆ ಈ ಪರಿಷ್ಕೃತ ದರವನ್ನು ಪ್ರದರ್ಶಿಸುವ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ಬರಬೇಕು ಎನ್ನುವುದು ಅಖಿಲ ಭಾರತ ಪೆಟ್ರೋಲಿಯಂ ಡೀಲರ್‌ಗಳ ಸಂಘದ ಆಗ್ರಹ. ದೈನಿಕ ದರ ಪರಿಷ್ಕರಣೆ ನಿರ್ಧಾರ ಏಕಪಕ್ಷೀಯ. ಇದಕ್ಕೆ ನಮ್ಮ ವಿರೋಧವಿದೆ ಎಂದು ಸಂಘದ ಅಧ್ಯಕ್ಷ ಅಜಯ್ ಬನ್ಸಲ್ ಹೇಳಿಕೆ ನೀಡಿದ್ದಾರೆ.
ಮಧ್ಯರಾತ್ರಿ ದರ ಬದಲಾವಣೆಗೆ ಕೆಲ ಗಂಟೆ ಕಾಲ ಹಿಡಿಯುತ್ತದೆ. ಈ ಅವಧಿಯಲ್ಲಿ ಬಂಕ್ ಮುಚ್ಚಬೇಕಾಗುತ್ತದೆ. ಈ ದರ ಬದಲಾವಣೆಗೆ ಪ್ರತೀ ಮಧ್ಯರಾತ್ರಿ ವಿಳಂಬವಾಗುವುದರಿಂದ ಭಾರಿ ನಷ್ಟವಾಗಿದೆ ಎನ್ನುವುದು ಅವರ ಅಭಿಪ್ರಾಯ. ಈ ಇಕ್ಕಟ್ಟಿನ ಸ್ಥಿತಿಯ ಬಗ್ಗೆ ಚರ್ಚಿಸಲು ಈ ತಿಂಗಳ 13ರಂದು ಸಂಘ ಮತ್ತು ತೈಲಕಂಪೆನಿಗಳ ಸಭೆ ಕರೆಯಲಾಗಿದೆ.