ಮೀನುಗಾರಿಕಾ ಬೋಟ್ ಗೆ ವಿದೇಶಿ ಹಡಗು ಡಿಕ್ಕಿ ; 2ಸಾವು
Update: 2017-06-11 11:34 IST
ಕೊಚ್ಚಿ, ಜೂ.11: ವಿದೇಶಿ ಹಡಗೊಂದು ಮೀನುಗಾರಿಕಾ ಬೋಟ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿಇಬ್ಬರು ಮೀನುಗಾರರು ಮೃತಪಟ್ಟು ಓರ್ವ ನಾಪತ್ತೆಯಾದ ಘಟನೆ ಕೊಚ್ಚಿಯಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.
ಬೋಟ್ ನಲ್ಲಿದ್ದ ಮೀನುಗಾರರಾದ ಕುಲಾಚಾಲ್ ನಿವಾಸಿ ತಂಬಿದುರೈ ಮತ್ತು ವಲಸೆ ಕಾರ್ಮಿಕ ರಾಹುಲ್ ಎಂಬವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ನಾಪತ್ತೆಯಾಗಿರುವ ಮೀನುಗಾರನಿಗೆ ಶೋಧಕಾರ್ಯ ಮುಂದುವರಿದಿದೆ.
ಪುಥುವಿಪೇನ್ ನಿಂದ ಹನ್ನೆರಡು ನಾಟಿಕಲ್ ದೂರದ ಸಮುದ್ರದಲ್ಲಿ ದುರಂತ ಸಂಭವಿಸಿದ್ದು, ಬೋಟ್ ನಲ್ಲಿ ಒಟ್ಟು 14 ಪ್ರಯಾಣಿಕರಿದ್ದರು. ಈ ಪೈಕಿ 11 ಮಂದಿ ಈಜಿ ದಡ ಸೇರಿದ್ದಾರೆ.
ಗಾಯಗೊಂಡವರನ್ನು ಕೊಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ನಡೆಸಿದ ಪನಾಮ ಮೂಲದ ಹಡಗು ಅಂಬರ್ ನ್ನು ಕೋಸ್ಟ್ ಗಾರ್ಡ್ ಮತ್ತು ನೌಕಾದಳದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಹಡಗು ಡಿಕ್ಕಿ ಹೊಡೆದ ರಭಸಕ್ಕೆ ಬೋಟ್ ಸಂಪೂರ್ಣ ಹಾನಿಗೊಂಡಿವೆ ಎಂದು ತಿಳಿದು ಬಂದಿದೆ.