ಗಾಂಧೀಜಿಯನ್ನು ‘ಚತುರ್ ಬನಿಯಾ’ ಎಂದಿದ್ದ ಶಾಗೆ ಡಿಎಂಕೆ ತರಾಟೆ
ಚೆನ್ನೈ,ಜೂ.11: ಮಹಾತ್ಮಾ ಗಾಂಧಿಯವರನ್ನು ‘ಚತುರ್ ಬನಿಯಾ(ಚಾಣಾಕ್ಷ ವ್ಯಾಪಾರಿ)’ ಎಂದು ಬಣ್ಣಿಸಿದ್ದಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ರವಿವಾರ ತರಾಟೆಗೆತ್ತಿಕೊಂಡ ಡಿಎಂಕೆಯು, ಅದೊಂದು ಅವಹೇಳನಕಾರಿ ಹೇಳಿಕೆಯಾಗಿದೆ ಎಂದು ಕಿಡಿಕಾರಿದೆ.
ಭಾರತವು ಬಹು ನಂಬಿಕೆಗಳ ಗುಚ್ಛವಾಗಿದೆ ಎಂಬ ಅರಿವನ್ನು ಗಾಂಧೀಜಿಯವರು ಜನರಲ್ಲಿ ಮೂಡಿಸಿದ್ದರು ಎಂದು ಡಿಎಂಕೆಯ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರೂ ಆಗಿರುವ ಸ್ಟಾಲಿನ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಂದ ಇಂತಹ ಹೇಳಿಕೆಯು ಹೊರಬಿದ್ದಿರುವುದು ವಿಷಾದನೀಯ. ಡಿಎಂಕೆಯ ಪರವಾಗಿ ತಾನು ಈ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಶುಕ್ರವಾರ ಛತ್ತೀಸ್‌ಗಡದ ರಾಯ್‌ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶಾ, ಗಾಂಧೀಜಿಯವರು ತುಂಬ ದೂರದೃಷ್ಟಿ ಹೊಂದಿದ್ದರು. ಅವರು ಚತುರ ವ್ಯಾಪಾರಿಯಾಗಿದ್ದರು, ಮುಂದೇನಾಗಲಿದೆ ಎನ್ನುವುದು ಅವರಿಗೆ ತಿಳಿದಿತ್ತು. ದೇಶಕ್ಕೆ ಸ್ವಾತಂತ್ರ ಲಭಿಸಿದ ತಕ್ಷಣ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದು ಅವರು ಹೇಳಿದ್ದರು ಎಂದಿದ್ದರು.
ಗಾಂಧಿಯವರ ‘ಬನಿಯಾ’ಜಾತಿಯನ್ನು ಪ್ರಸ್ತಾಪಿಸಿದ್ದ ಶಾ ಹೇಳಿಕೆಯು ರಾಜಕೀಯ ವಿವಾದವನ್ನು ಸೃಷ್ಟಿಸಿದ್ದು, ರಾಷ್ಟ್ರಪಿತನನ್ನು ಅವಮಾನಿಸಿರುವುದಕ್ಕಾಗಿ ಅವರು ಕ್ಷಮೆ ಯಾಚಿಸಬೇಕೆಂದು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಆಗ್ರಹಿಸಿವೆ.