ಕೇರಳದಲ್ಲಿ ಸರಕಾರಿ ಕಾರ್ಯಕ್ರಮಗಳಿಗೆ ರಾಯಭಾರಿಗಳಾಗಿ ಭಿನ್ನಚೇತನ ಮಕ್ಕಳು
ತಿರುವನಂತಪುರ,ಜೂ.11: ಜಾದೂ ವಿದ್ಯೆಯಲ್ಲಿ ವಿಶೇಷ ತರಬೇತಿ ಪಡೆದಿರುವ ಬುದ್ಧಿಮಾಂದ್ಯ, ಭಿನ್ನಚೇತನ ಮಕ್ಕಳ ಗುಂಪೊಂದು ಕೇರಳ ಸರಕಾರದ ಮಹತ್ವಾಕಾಂಕ್ಷೆಯ ಸಬಲೀಕರಣ ಕಾರ್ಯಕ್ರಮವೊಂದರ ಬ್ರಾಂಡ್ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಲಿದೆ.
ಸೋಮವಾರ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರು ಇಂತಹ 23 ಮಕ್ಕಳನ್ನು ಸರಕಾರದ ‘ಅನುಯಾತ್ರಾ’ ಕಾರ್ಯಕ್ರಮದ ರಾಯಭಾರಿಗಳನ್ನಾಗಿ ಘೋಷಿಸಲಿದ್ದಾರೆ.
ಈ ವಿನೂತನ ಉಪಕ್ರಮವು ಭಿನ್ನಚೇತನ ಮಕ್ಕಳನ್ನು ಮುಖ್ಯವಾಹಿನಿ ಸಮಾಜದ ಮುಂಚೂಣಿಗೆ ತರುವ ಮೂಲಕ ರಾಜ್ಯವನ್ನು ಭಿನ್ನಚೇತನ ಸ್ನೇಹಿಯನ್ನಾಗಿ ಪರಿವರ್ತಿಸುವ ಮತ್ತು ಅವರನ್ನು ಸಬಲಗೊಳಿಸುವ ಉದ್ದೇಶವನ್ನು ಹೊಂದಿದೆ. ಉಪಕ್ರಮದ ಅಂಗವಾಗಿ 23 ಆಯ್ದ ಭಿನ್ನಚೇತನ ಮಕ್ಕಳಿಗೆ ಇಲ್ಲಿಯ ಮ್ಯಾಜಿಕ್ ಅಕಾಡಮಿಯಲ್ಲಿ ಖ್ಯಾತ ಜಾದೂಗಾರ ಗೋಪಿನಾಥ ಮುತ್ತುಕಾಡ್ ಅವರ ನೇತೃತ್ವದಲ್ಲಿ ಮೂರು ತಿಂಗಳ ಕಾಲ ಜಾದೂವಿನಲ್ಲಿ ವಿಶೇಷ ತರಬೇತಿಯನ್ನು ನೀಡಲಾಗಿದೆ.
ಈ ಮಕ್ಕಳು ಇಲ್ಲಿಯ ಟಾಗೋರ್ ಥಿಯೇಟರ್‌ನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ತಮ್ಮ ಚೊಚ್ಚಲ ಪ್ರದರ್ಶನವನ್ನು ನಿಡಲಿದ್ದಾರೆ.
‘ಅನುಯಾತ್ರಾ’ ಸರಕಾರದ ಕನಸಿನ ಯೋಜನೆಯಾಗಿದೆ ಎಂದು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆ ಕೆ.ಕೆ.ಶೈಲಜಾ ಅವರು ಹೇಳಿದರು.
ಈ ಮಕ್ಕಳನ್ನೊಳಗೊಂಡ ಜಾದೂ ತಂಡದ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಲಿದ್ದು, ಇದು ವಿಶ್ವದ ಇಂತಹ ಮೊದಲ ತಂಡವಾಗಲಿದೆ.