ಕೃಷಿ ಸಾಲಮನ್ನಾ ಪ್ರಕ್ರಿಯೆಯಲ್ಲಿ ಕೇಂದ್ರದ ಪಾತ್ರವಿಲ್ಲ: ಜೇಟ್ಲಿ

Update: 2017-06-12 13:09 GMT

 ಹೊಸದಿಲ್ಲಿ, ಜೂ.12: ಕೃಷಿ ಸಾಲಮನ್ನಾ ವಿಷಯವು ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದು ಕೇಂದ್ರ ಸರಕಾರ ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವುದಿಲ್ಲ. ಇದರ ವೆಚ್ಚವನ್ನು ಆಯಾ ರಾಜ್ಯಗಳೇ ಭರಿಸಬೇಕು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

 ರೈತರ ಸಾಲಮನ್ನ ಪ್ರಕ್ರಿಯೆಗೆ ಕೇಂದ್ರ ಸರಕಾರದಿಂದ ಯಾವುದೇ ಆರ್ಥಿಕ ನೆರವು ದೊರಕದು ಎಂದು ಜೇಟ್ಲೀ ಸ್ಪಷ್ಟ ಪಡಿಸಿದ್ದಾರೆ. ಈ ರೀತಿಯ ಯೋಜನೆಗೆ ಮುಂದಾಗುವ ರಾಜ್ಯಗಳು ಇದಕ್ಕೆ ಸೂಕ್ತವಾದ ಸಂಪನ್ಮೂಲವನ್ನು ತಾವೇ ಕ್ರೋಢೀಕರಿಸಿಕೊಳ್ಳಬೇಕಿದೆ.ಈ ಬಗ್ಗೆ ಇದಕ್ಕಿಂತ ಹೆಚ್ಚಿಗೆ ಹೇಳಲೇನೂ ಇಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.

 ರೈತರ ಸಾಲ ಮನ್ನಾ ಮಾಡುವುದಾಗಿ ರವಿವಾರ ಮಹಾರಾಷ್ಟ್ರ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಈ ಹೇಳಿಕೆಗೆ ಮಹತ್ವವಿದೆ.

ಈ ಆರ್ಥಿಕ ವರ್ಷದಲ್ಲಿ ರೈತರ ಸಾಲ ಮನ್ನಾ ಮಾಡಿದ ಪ್ರಪ್ರಥಮ ರಾಜ್ಯವೆಂಬ ಶ್ರೇಯಸ್ಸು ಉತ್ತರ ಪ್ರದೇಶಕ್ಕೆ ಸಲ್ಲುತ್ತದೆ. ಉ.ಪ್ರದೇಶ ಸರಕಾರ ಸಣ್ಣ ಮತ್ತು ಬಡ ಕೃಷಿಕರಿಂದ ಬರಬೇಕಿದ್ದ 36,359 ಕೋಟಿ ರೂ. ಮೊತ್ತದ ಕೃಷಿ ಸಾಲವನ್ನು ಮನ್ನಾ ಮಾಡಿದೆ.

 ಈ ಮುಂಗಾರಿನಲ್ಲಿ ಬಂಪರ್ ಬೆಳೆಯಾಗಿದ್ದರೂ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೃಷ್ಯುತ್ಪನ್ನಗಳ ಬೆಲೆ ಕುಸಿದ ಕಾರಣ ಹಲವು ರಾಜ್ಯಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದು ದೇಶದಾದ್ಯಂತ ರೈತರ ಆಂದೋಲನ, ಪ್ರತಿಭಟನೆಗೆ ಕಾರಣವಾಗಿತ್ತು.

ರಾಜ್ಯಗಳು ರೈತರ ಸಾಲಮನ್ನಾ ಮಾಡುವುದರಿಂದ ಆರ್ಥಿಕ ಹಿಂಜರಿತ ಉಂಟಾಗುವ ಅಪಾಯವಿದೆ. ಇದು ಹಣದುಬ್ಬರದ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ರಿಸರ್ವ್ ಬ್ಯಾಂಕ್ 2017-18ರ ದ್ವಿತೀಯ ದ್ವೈಮಾಸಿಕ ಆರ್ಥಿಕ ಕಾರ್ಯನೀತಿಯ ಪರಿಶೀಲನೆಯ ಸಂದರ್ಭ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News