ಸಂಜಯ್ ದತ್ ಗೆ ಹೊಸ ಸಂಕಟ

Update: 2017-06-12 14:31 GMT

ಮುಂಬೈ, ಜೂ.12: 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಐದು ವರ್ಷ ಸೆರೆವಾಸಕ್ಕೆ ಒಳಗಾಗಿದ್ದ ಬಾಲಿವುಡ್ ನಟ ಸಂಜಯ್ ದತ್‌ರನ್ನು ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಬಂಧಮುಕ್ತಗೊಳಿಸಿರುವ ಮಹಾರಾಷ್ಟ್ರ ಸರಕಾರದ ಕ್ರಮವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ದತ್‌ರನ್ನು ಅವಧಿಪೂರ್ವ ಬಂಧಮುಕ್ತಗೊಳಿಸಿರುವ ಕ್ರಮಕ್ಕೆ ಸಮರ್ಥನೆ ನೀಡುವಂತೆ ಬಾಂಬೆ ಹೈಕೋರ್ಟ್ ಸೂಚಿಸಿದ್ದು ಸಂಜಯ್ ದತ್‌ಗೆ ಮತ್ತೊಮ್ಮೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಭಾಗವಾಗಿರುವ ಕೆಲವು ಶಸ್ತ್ರಾಸ್ತ್ರಗಳು ದತ್ ಬಳಿ ಇದ್ದ ಕಾರಣ ಅವರಿಗೆ ಐದು ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ವಿಚಾರಣೆ ಸಂದರ್ಭ ಜಾಮೀನು ಪಡೆದಿದ್ದ ದತ್, 2013ರಲ್ಲಿ ಸುಪ್ರೀಂಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿದ ಬಳಿಕ ನ್ಯಾಯಾಲಯಕ್ಕೆ ಶರಣಾಗಿದ್ದರು. ಪುಣೆಯ ಯೆರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ದತ್‌ರನ್ನು ‘ಉತ್ತಮ ನಡತೆ’ಯ ಕಾರಣದಿಂದ ಎಂಟು ತಿಂಗಳ ಮೊದಲೇ ಬಂಧಮುಕ್ತಗೊಳಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಪುಣೆಯ ನಿವಾಸಿ ಪ್ರದೀಪ್ ಭಾಲೇಕರ್ ಎಂಬವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದಆರ್.ಎಂ.ಸಾವಂತ್ ಮತ್ತು ಸಾಧನಾ ಜಾಧವ್ ಅವರಿದ್ದ ವಿಭಾಗೀಯ ಪೀಠವೊಂದು, ದತ್ ಅವರನ್ನು ಅವಧಿಪೂರ್ಣ ಬಿಡುಗಡೆ ಮಾಡಲು ಯಾವ ಅಂಶವನ್ನು ಪರಿಗಣಿಸಲಾಗಿದೆ ಮತ್ತು ಯಾವ ಮಾನದಂಡ ಪಾಲಿಸಲಾಗಿದೆ ಎಂದು ಅಫಿದಾವಿತ್ ಸಲ್ಲಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ.

   ಶಿಕ್ಷೆಯ ಅವಧಿಯಲ್ಲಿ ಸುಮಾರು ಅರ್ಧಾಂಶ ಅವಧಿಯನ್ನು ಪರೋಲ್ ಮೇಲೆ ಜೈಲಿನಿಂದ ಹೊರಗೆ ಕಳೆದಿರುವಾಗ, ದತ್ ನಡತೆ ಉತ್ತಮವಾಗಿತ್ತು ಎಂದು ಅಧಿಕಾರಿಗಳು ಹೇಗೆ ನಿರ್ಧರಿಸಿದರು, ಡಿಐಜಿ, ಇತರ ಖೈದಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆಯೇ ಅಥವಾ ಬಂದೀಖಾನೆ ಅಧೀಕ್ಷಕರು ನೇರವಾಗಿ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರೇ ಎಂದು ವಿಭಾಗೀಯ ಪೀಠ ಪ್ರಶ್ನಿಸಿದೆ. ಒಂದು ವಾರದ ಬಳಿಕ ವಿಚಾರಣೆ ಮುಂದುವರಿಸುವುದಾಗಿ ನ್ಯಾಯಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News