ನಾವು ಯಾವತ್ತೂ ಒಬ್ಬರಿಗೊಬ್ಬರು "ಐ ಲವ್ ಯೂ" ಎಂದಿಲ್ಲ : ಶಾಹಿನಾ ಬೇಗಂ ಮತ್ತು ಮೊಮಿನುಲ್ ಇಸ್ಲಾಂ

Update: 2017-06-13 05:41 GMT

ನನ್ನ ಹೆತ್ತವರು ಬಹಳ ಬಡವರು. ಅವರು ಅನುಭವಿಸುತ್ತಿದ್ದ ಒತ್ತಡಕ್ಕೆ ನಾನೇ ಮುಖ್ಯ ಕಾರಣ. ನಾನು ಬೆಳೆದು ದೊಡ್ಡವಳಾದಾಗ ಎಲ್ಲರೂ ನನಗೆ ಬೇಗ ಮದುವೆ ಮಾಡಬೇಕೆಂದು ಕೊಂಡರು. ಇಲ್ಲದೇ ಹೋದಲ್ಲಿ ಕುಳ್ಳಗಿನ ಕಪ್ಪಗಿನ ಹುಡುಗಿಗೆ ವರನನ್ನು ಹುಡುಕುವುದು ಕಷ್ಟ ಎಂದು ಅವರು ಹೇಳಿದರು. ನನ್ನ ಮುಖ ತುಂಬಾ ಪೌಡರ್ ಬಳಿದು ನನಗೆ ನಡೆದಾಡಲು ಕಷ್ಟವಾಗಿದ್ದ ಬೂಟು ಧರಿಸಿ ನಡೆಯುವುದು ನನ್ನ ಮುಖ್ಯ ಕೆಲಸವಾಗಿತ್ತು.

ನನ್ನನ್ನು ನೋಡಲು ಬಂದ ಭಾವೀ ವರರು ಮತ್ತವರ ಕುಟುಂಬಗಳಿಗೆ ನಾನು ಇಷ್ಟವಾಗಲೇ ಇಲ್ಲ. ನಾನು ಎಷ್ಟು ಚೆನ್ನಾಗಿ ಅಡುಗೆ ಮಾಡಬಲ್ಲೆ ಅಥವಾ ನಾನು ಎಷ್ಟು ಸಂಪಾದಿಸುತ್ತಿದ್ದೇನೆ ಎಂಬಿತ್ಯಾದಿ ಅವರ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಷ್ಟವಾಗಿತ್ತು. ನನ್ನ ಕಾಲುಗಳು ಸರಿಯಾಗಿದೆಯೇ ಎಂದು ತಿಳಿಯಲು ನನಗೆ ನಡೆಯಲು ಹೇಳಿದಾಗ ಇಲ್ಲವೇ ನನ್ನ ಕೂದಲನ್ನು ಮುಟ್ಟಿ ಅದು ನೈಜ ಕೂದಲು ಇಲ್ಲವೇ ನಕಲಿ ಕೂದಲೇ ಎಂದು ಅವರು ತಿಳಿಯಲು ಪ್ರಯತ್ನಿಸಿದಾಗ ನನಗೆ ಮುಜುಗರವಾಗುತ್ತಿತ್ತು.

ನನ್ನ ಪತಿಯಾಗುವವನನ್ನು ನಾನು ಮೊದಲ ಬಾರಿ ಗದ್ದೆಯ ಸಮೀಪ ಭೇಟಿಯಾದೆ. ಆತನನ್ನು ಭೇಟಿಯಾಗಲು ಹೋಗುವಾಗ ನನಗೆ ಅಸಹನೆ ಉಂಟಾಗಿತ್ತು. ಆತನನ್ನು ಭೇಟಿಯಾಗುವುದೇ ಬೇಡ, ಹಿಂದೆ ಹೋಗುವ ಎಂದು ನಾನು ಯೋಚಿಸುತ್ತಿದ್ದರೂ ನನ್ನ ಸಂಬಂಧಿಯೊಬ್ಬರು ಬಲವಂತಪಡಿಸಿದರಲ್ಲದೆ ಆತನೊಂದಿಗೆ ಪ್ರತ್ಯೇಕವಾಗಿ ಮಾತನಾಡುವಂತೆ ಹೇಳಿದರು.

ನಾವಿಬ್ಬರೂ ಸುಮ್ಮನೆ ಕುಳಿತುಕೊಂಡಿದ್ದೆವು. ನಾನು ನನ್ನ ಬೂಟುಗಳನ್ನೇ ನೋಡುತ್ತಾ ಆತನಿಂದಲೂ ಅದೇ ಪ್ರಶ್ನೆಗಳನ್ನು ನಿರೀಕ್ಷಿಸಿದ್ದೆ. ಆತ ನನ್ನ ಬೂಟುಗಳತ್ತ ಕೈತೋರಿಸಿ ಅವುಗಳಲ್ಲಿ ಹೇಗೆ ನಡೆಯುತ್ತೇನೆಂದು ಕೇಳಿದ. ಆತನ ಮುಖ ಅದೆಷ್ಟು ಮುಗ್ಧವಾಗಿತ್ತೆಂದರೆ ನಾನು ನಗಲು ಆರಂಭಿಸಿದೆ. ನಂತರ ಆತನನ್ನು ಏನು ಬೇಕಾದರೂ ಕೇಳಬಹುದೆಂದು ಆತ ಹೇಳಿದ. ನಾನು ಒಂದು ಕ್ಷಣ ಸುಮ್ಮನಾದೆ.

ಇಲ್ಲಿಯ ತನಕ ಯಾರು ಕೂಡಾ ನನಗೆ ಈ ರೀತಿ ಹೇಳಿರಲಿಲ್ಲ. ಆತ ಯಾವ ರೀತಿಯ ಹುಡುಗಿಯನ್ನು ಮದುವೆಯಾಗಲು ಇಷ್ಟ ಪಡುತ್ತಾನೆಂದು ನಾನು ಕೇಳಿದೆ. ‘‘ನಿನ್ನ ಹಾಗೆ ನಗಬಲ್ಲ ಹೆಂಡತಿ ನನಗೆ ಬೇಕು. ನಾನು ತುಂಬಾ ಕಡಿಮೆ ಸಂಪಾದಿಸುತ್ತೇನೆ. ಹೇಳಿಕೊಳ್ಳವಂತಹ ಗುಣ ನನ್ನಲ್ಲಿಲ್ಲ. ಕೆಲವೊಮ್ಮೆ ಚೆನ್ನಾಗಿ ಅಡುಗೆ ಮಾಡಬಲ್ಲೆ ಹಾಗು ಹಳೆಯ ಹಾಡುಗಳನ್ನು ಹಾಡಬಲ್ಲೆ. ನಾನು ನಿನಗೆ ಅರ್ಹ ಎಂದು ನಿನಗನಿಸಿದರೆ ನನ್ನ ತಾಯಿಯನ್ನು ಕರೆದುಕೊಂಡು ಬರುತ್ತೇನೆ,’’ ಎಂದ.

ನಮಗೆ ಮದುವೆಯಾಗಿ ಆರು ತಿಂಗಳಾಗಿದೆ. ನಾನು ಮತ್ತೆ ಆ ಬೂಟುಗಳನ್ನು ಧರಿಸಿಲ್ಲ. ಆತ ನನಗೆ ಸ್ಲಿಪ್ಪರ್ ಮಾತ್ರ ಖರೀದಿಸುತ್ತಾನೆ. ಕೆಲಸದ ನಂತರ ನಾವಿಬ್ಬರೂ ಜತೆಯಾಗಿಯೇ ಮನೆಗೆ ಬರುತ್ತೇವೆ. ಹಿಂದೆ ಬರುವಾಗ ತರಕಾರಿ ಖರೀದಿಸುತ್ತೇವೆ, ಸಣ್ಣಪುಟ್ಟ ವಿಷಯಗಳಿಗೆಲ್ಲಾ ನಗುತ್ತೇವೆ. ಆದರೆ ನಾವು ಪ್ರೇಮದ ಬಗ್ಗೆ ಮಾತನಾಡಲೇ ಇಲ್ಲ. ನಮಗೆ ಅದರ ಬಗೆ ಮಾತನಾಡಲು ನಾಚಿಕೆಯಾಗುತ್ತದೆ. ಹಾಗೂ ನಾವು ‘ಐ ಲವ್ ಯೂ’ ಎಂದು ಒಬ್ಬರಿಗೊಬ್ಬರು ಹೇಳಿರಲೇ ಇಲ್ಲ. ಈ ದಾರಿಯಲ್ಲಿ ಮನೆ ತಲುಪಲು ಬಹಳ ಹೊತ್ತು ತಗಲುವುದಾದರೂ ನಾವು ಆ ಹೆಚ್ಚುವರಿ ಮೈಲಿಗಳಲ್ಲಿ ಜತೆಯಾಗಿಯೇ ಸಾಗಲು ಇಷ್ಟಪಡುತ್ತೇವೆ.

- ಟೆಕ್ಸ್‌ಟೈಲ್ ಕಾರ್ಮಿಕೆ ಶಹೀನಾ ಬೇಗಂ (19) ಆಕೆಯ ಪತಿ ಮೊಮಿನುಲ್ ಇಸ್ಲಾಂ (21) ಜತೆ.

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News