ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಇದನ್ನು ಪ್ರಯತ್ನಿಸಿ.....

Update: 2017-06-13 10:16 GMT

ಮಹಾನಗರಗಳಲ್ಲಿ ವಾಸವಿರುವವರು ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ 10,000 ರೂ.ಕನಿಷ್ಠ ಬ್ಯಾಲನ್ಸ್‌ನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ನೀವು ಇದರಲ್ಲಿ ವಿಫಲರಾದರೆ 5,000 ರೂ.ಗಿಂತ ಕಡಿಮೆ ದೈನಂದಿನ ಸರಾಸರಿ ಬ್ಯಾಲನ್ಸ್‌ಗೆ 350 ರೂ. ಮತ್ತು ಈ ಬ್ಯಾಲನ್ಸ್ 5,000 ರೂ.ಮತ್ತು 10,000 ರೂ.ಗಳ ನಡುವೆಯಿದ್ದರೆ 250 ರೂ.ಗಳ ಮಾಸಿಕ ದಂಡವನ್ನು ನೀವು ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ. ಪಾವತಿಸುವುದೇನು ಬಂತು...? ಬ್ಯಾಂಕು ನಿಮ್ಮನ್ನು ಕೇಳುವ ಗೋಜಿಗೂ ಹೋಗದೇ ನಿಮ್ಮ ಖಾತೆಯಲ್ಲಿ ಈ ದಂಡದ ಮೊತ್ತವನ್ನು ಕಡಿತಗೊಳಿಸುತ್ತದೆ. ನೀವು ಶೂನ್ಯ ಬ್ಯಾಲನ್ಸ್ ವೇತನ ಖಾತೆಯನ್ನು ಹೊಂದಿರದಿದ್ದರೆ ಈ ದಂಡವನ್ನು ತೆರುವುದು ನಿಮ್ಮ ಪ್ರಾರಬ್ಧವೇ ಸರಿ.

ಆದರೆ ಈ ದಂಡದಿಂದ ತಪ್ಪಿಸಿಕೊಳ್ಳಲು ಒಂದು ದಾರಿಯಂತೂ ಇದೆ. ಸರಾಸರಿ ಬ್ಯಾಲನ್ಸ್ ಕಾಯ್ದುಕೊಳ್ಳಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದಾದರೆ ನೀವು ನಿಮ್ಮ ಉಳಿತಾಯ ಖಾತೆಯನ್ನು ಬೇಸಿಕ್ ಉಳಿತಾಯ ಠೇವಣಿ ಖಾತೆ(ಬಿಎಸ್‌ಡಿಎ)ಯ ನ್ನಾಗಿ ಪರಿವರ್ತಿಸಿಕೊಳ್ಳಬಹುದು. ಈ ಖಾತೆಯಲ್ಲಿ ನಿಮ್ಮ ಬ್ಯಾಲನ್ಸ್ ಶೂನ್ಯಕ್ಕಿಳಿದರೂ ಯಾವುದೇ ದಂಡವನ್ನು ನೀವು ಪಾವತಿಸಬೇಕಿಲ್ಲ. ಆದರೆ ನೆನಪಿಡಿ...ಯಾವುದೂ ಪುಕ್ಕಟೆಯಾಗಿ ದೊರೆಯುವುದಿಲ್ಲ. ಹೀಗಾಗಿ ಬೇಸಿಕ್ ಉಳಿತಾಯ ಠೇವಣಿ ಖಾತೆಯಡಿ ನೀವು ಉಳಿತಾಯ ಖಾತೆಯಲ್ಲಿ ಹೊಂದಿದ್ದ ಕೆಲವು ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ಬೇಸಿಕ್ ಉಳಿತಾಯ ಠೇವಣಿ ಖಾತೆಗಿರುವ ನಿರ್ಬಂಧಗಳು

ಐಸಿಐಸಿಐನಂತಹ ಕೆಲವು ಬ್ಯಾಂಕುಗಳು ಈ ಖಾತೆಗೆ ನೆಟ್ ಬ್ಯಾಂಕಿಂಗ್ ಸೌಲಭ್ಯ ವನ್ನೊದಗಿಸುವುದಿಲ್ಲ. ನಿಮಗೆ ನೆಟ್ ಬ್ಯಾಂಕಿಂಗ್ ಅಭ್ಯಾಸವಾಗಿದ್ದರೆ ಇದಂತೂ ದೊಡ್ಡ ನಷ್ಟವೇ ಸರಿ.

ಕೆಲವು ಬ್ಯಾಂಕುಗಳು ವರ್ಷಕ್ಕೆ ಸೀಮಿತ ಚೆಕ್ ಹಾಳೆಗಳನ್ನು ಒದಗಿಸುತ್ತವೆ. ಉದಾಹರಣೆಗೆ ನೀವು ಕೇವಲ 15 ಚೆಕ್ ಹಾಳೆಗಳಿಗೆ ಅರ್ಹರಾಗಿರುತ್ತೀರಿ ಮತ್ತು ಈ ಮಿತಿಯನ್ನು ದಾಟಿದರೆ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 ಇಂತಹ ಖಾತೆಗಳಲ್ಲಿ ನಾಲ್ಕು ಬಾರಿ ನಗದು ವಹಿವಾಟುಗಳನ್ನು ನಡೆಸಲು ಆರ್‌ಬಿಐ ಅವಕಾಶ ಕಲ್ಪಿಸಿದೆ. ಇದನ್ನು ಮೀರಿದರೆ ನಿಮ್ಮ ಬ್ಯಾಂಕು ಶುಲ್ಕ ವಿಧಿಸುವ ಅಧಿಕಾರ ಹೊಂದಿರುತ್ತದೆ. ಹೀಗಾಗಿ ನಿಮಗೆ ಶುಲ್ಕ ವಿಧಿಸಬೇಕೋ ಬೇಡವೋ ಎನ್ನುವುದು ಬ್ಯಾಂಕಿಗೆ ಬಿಟ್ಟಿದ್ದು.

ಬೇಸಿಕ್ ಉಳಿತಾಯ ಠೇವಣಿ ಖಾತೆಗೂ ಡೆಬಿಟ್ ಕಾರ್ಡ್ ನೀಡಬೇಕು ಎನ್ನುವುದು ಆರ್‌ಬಿಐ ನಿಯಮ, ಹೀಗಾಗಿ ನಿಮಗೆ ಡೆಬಿಟ್ ಕಾರ್ಡ್‌ಂತೂ ದೊರೆಯುತ್ತದೆ. ಆದರೆ ಹಣ ಹಿಂದೆಗೆತ ನಿರ್ಬಂಧಗಳು ಅನ್ವಯಿಸುತ್ತವೆ.

ನೀವು ನಿಮ್ಮ ಉಳಿತಾಯ ಖಾತೆಯನ್ನು ನೋ ಫ್ರಿಲ್ಸ್ ಅಂದರೆ ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಬಹುದು. ಇಂತಹ ಖಾತೆಗಳಿಗೆ ನಾಮಿನೇಷನ್ ಸೌಲಭ್ಯವಿರುತ್ತದೆ.

ಐಸಿಐಸಿಐನಂತಹ ಕೆಲವು ಬ್ಯಾಂಕುಗಳು ಬೇಸಿಕ್ ಉಳಿತಾಯ ಠೇವಣಿ ಖಾತೆಗಳಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುವುದಿಲ್ಲ.

ಹೆಚ್ಚಿನ ಸಂದರ್ಭಗಳಲ್ಲಿ ಉಳಿತಾಯ ಖಾತೆಗಳಲ್ಲಿ,ಅದೂ ಖಾಸಗಿ ಬ್ಯಾಕುಗಳಲ್ಲಿ ಅಗತ್ಯ ಬ್ಯಾಲನ್ಸ್‌ನ್ನು ಕಾಯ್ದುಕೊಳ್ಳುವುದು ಮಧ್ಯಮ ವರ್ಗದವರಿಗೆ ನಿಜಕ್ಕೂ ಕಷ್ಟವೇ. ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಈ ಕನಿಷ್ಠ ಬ್ಯಾಲನ್ಸ್ ಪ್ರಮಾಣ ಈಗಾಗಲೇ ತುಂಬ ಕಡಿಮೆಯಿದೆ. ಹೆಚ್ಚಿನ ಸರಕಾರಿ ಬ್ಯಾಂಕುಗಳು ಮಾಸಿಕ ಕೇವಲ 1,000 ರೂ.ಗಳ ಕನಿಷ್ಠ ಬ್ಯಾಲನ್ಸ್‌ನ್ನು ಕೇಳುತ್ತವೆ. ನೀವು ಬಯಸಿದರೆ ನಿಮ್ಮ ಉಳಿತಾಯ ಖಾತೆಯನ್ನು ಬೇಸಿಕ್ ಉಳಿತಾಯ ಠೇವಣಿ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಬಹುದು,ಆದರೆ ಶುಲ್ಕಗಳ ಬಗ್ಗೆ ಎಚ್ಚರಿಕೆಯಿದ್ದರೆ ಒಳ್ಳೆಯದು.

ನೆನಪಿಡಿ,ಖಾತೆ ತೆರೆಯಲು ವಯಸ್ಸಿನ ಯಾವುದೇ ಮಿತಿಯಿಲ್ಲ, ಆದಾಯವನ್ನು ತೋರಿಸುವ ಅಗತ್ಯವೂ ಇಲ್ಲ. ಹೀಗಾಗಿ ನೀವು ಕಡಿಮೆ ವಹಿವಾಟುಗಳನ್ನು ನಡೆಸುವವ ರಾಗಿದ್ದರೆ ಮಾತ್ರ ಈ ಖಾತೆಯನ್ನು ತೆರೆಯಬಹುದಾಗಿದೆ. ಅಥವಾ ಈಗಾಗಲೇ ಹೇಳಿರುವಂತೆ ಹಾಲಿಖಾತೆಯನ್ನೇ ಬೇಸಿಕ್ ಉಳಿತಾಯ ಠೇವಣಿ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News