ಮಠಾಧೀಶರಿಗಿಟ್ಟ ವಿಶೇಷ ಆಸನ ಬದಿಗೆ ಸರಿಸಿದ ಕೇರಳ ಸಚಿವ

Update: 2017-06-13 13:58 GMT

ತಿರುವನಂತಪುರಂ , ಜೂ. 13 : ಮಠಾಧೀಶರಿಗಾಗಿ ವೇದಿಕೆಯಲ್ಲಿ ಇರಿಸಲಾಗಿದ್ದ ವಿಶೇಷ ಸಿಂಹಾಸನ ಮಾದರಿಯ ಆಸನವನ್ನು ಸ್ವತಃ ಬದಿಗೆ ಸರಿಸಿದ ಕೇರಳದ ಸಹಕಾರ ಹಾಗು ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್ ವ್ಯಾಪಕ ಶ್ಲಾಘನೆಗೆ ಪಾತ್ರರರಾಗಿದ್ದಾರೆ.

ಈ ವಿಶೇಷ ಆಸನವನ್ನು ಶೃಂಗೇರಿ ಮಠಾಧೀಶರಿಗಾಗಿ ಇಡಲಾಗಿತ್ತು ಎಂದು ಮಲಯಾಳಂ ಪತ್ರಿಕೆ ಮಂಗಳಂ ಅನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. 
ರಾಜಧಾನಿ ತಿರುವನಂತಪುರಂ ನಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ಆಗಮಿಸಿದ ಸುರೇಂದ್ರನ್ ವೇದಿಕೆಯಲ್ಲಿ ಬೃಹತ್ ಆಸನವೊಂದನ್ನು ನೋಡಿದರು. ಅದರ ಬಗ್ಗೆ ಕೇಳಿದಾಗ ಮಠಾಧೀಶರಿಗಾಗಿ ಇಡಲಾಗಿದೆ ಎಂದು ಕಾರ್ಯಕ್ರಮದ ಸಂಘಟಕರು ಹೇಳಿದ್ದಾರೆ.

ಹಿಂದೆ ಮುಂದೆ ನೋಡದ ಸುರೇಂದ್ರನ್ ತಕ್ಷಣ ಅಲ್ಲಿದ್ದ ಶಾಸಕ, ಮಾಜಿ ಸಚಿವ ವಿಎಸ್ ಶಿವಕುಮಾರ್ ಜೊತೆ ಸೇರಿ ಆ ವಿಶೇಷ ಆಸನವನ್ನು ತಳ್ಳಿ ಬದಿಗೆ ಸರಿಸಿದ್ದಾರೆ. ಅಲ್ಲಿಗೆ ಉಳಿದವರಿಗೆ ಇಟ್ಟಂತೆ ಸಾಮಾನ್ಯ ಪ್ಲಾಸ್ಟಿಕ್ ಕುರ್ಚಿ ಇಟ್ಟಿದ್ದಾರೆ. 


ಕಾರ್ಯಕ್ರಮಕ್ಕೆ ಶೃಂಗೇರಿ ಮಠಾಧೀಶರು ಆಗಮಿಸಿಲ್ಲ. ಅಲ್ಲಿಗೆ ಬಂದ ಬೇರೊಬ್ಬ ಸ್ವಾಮೀಜಿಗಳು ಅಲ್ಲಿ ಉದ್ಘಾಟನೆಯಾದ ಈಜುಕೊಳಕ್ಕೆ ಆಶೀರ್ವದಿಸಿ ವೇದಿಕೆ ಏರದೆ ಹಾಗೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. 
ಸಚಿವರ ಈ ಕ್ರಮಕ್ಕೆ ವಿಪಕ್ಷ ಕಾಂಗ್ರೆಸ್ ಶಾಸಕರೂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News