ಗುಜರಾತ್‌ನ ಬಿಜೆಪಿ ಸರಕಾರದ ಮಹಾ ಯಡವಟ್ಟು: ಅಖಿಲೇಶ್ ಚಿತ್ರವಿರುವ ಶಾಲಾಬ್ಯಾಗ್‌ಗಳ ವಿತರಣೆ!

Update: 2017-06-13 15:01 GMT

ಅಹ್ಮದಾಬಾದ್,ಜೂ.13: ಕುತೂಹಲಕರ ಘಟನಾವಳಿಯಲ್ಲಿ ಬಿಜೆಪಿ ಆಡಳಿತವಿರುವ ಗುಜರಾತ್‌ನ ಬುಡಕಟ್ಟು ಪ್ರಾಬಲ್ಯದ ಛೋಟಾ ಉದಯಪುರ ಜಿಲ್ಲೆಯಲ್ಲಿನ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ ಅವರ ಚಿತ್ರವುಳ್ಳ ಸುಮಾರು 12,000 ಶಾಲಾಬ್ಯಾಗ್‌ಗಳನ್ನು ವಿತರಿಸಲಾಗಿದೆ!

ಶಿಕ್ಷಣ ಇಲಾಖೆಯು ಈ ಬ್ಯಾಗ್‌ಗಳು ಗುಜರಾತ್‌ಗೆ ತಲುಪಿದ್ದು ಹೇಗೆ ಎಂಬ ಬಗ್ಗೆ ವಿಚಾರಣೆಗೆ ಆದೇಶಿಸಿದೆ.

ಈ ಬ್ಯಾಗುಗಳ ಮೇಲೆ ಗುಜರಾತ್ ಸರಕಾರದ ‘ಶಾಲಾ ಪ್ರವೇಶೋತ್ಸವ ’ಕಾರ್ಯ ಕ್ರಮದ ಸ್ಟಿಕರ್ ಇದ್ದು, ಅದರ ಕೆಳಗೆ ನಗುತ್ತಿರುವ ಅಖಿಲೇಶ್ ಚಿತ್ರವಿದೆ.

ವಾರ್ಷಿಕ ಅಭಿಯಾನವಾಗಿರುವ ಈ ಕಾರ್ಯಕ್ರಮದಡಿ ಒಂದನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ಬ್ಯಾಗ್‌ಗಳನ್ನು ವಿತರಿಸಲಾಗಿದೆ.

ವಸೆದಿ ಗ್ರಾಮದಲ್ಲಿಯ ಶಾಲೆಯೊಂದರ ಶಿಕ್ಷಕರು ಬ್ಯಾಗ್‌ನ್ನು ಪರಿಶೀಲಿಸುತ್ತಿದ್ದಾಗ ಅದಕ್ಕೆ ಅಂಟಿಸಿದ್ದ ’ಜಿಲ್ಲಾ ಪಂಚಾಯತ್ ಶಾಲಾ ಪ್ರವೇಶೋತ್ಸವ ’ಸ್ಟಿಕರ್ ಕಿತ್ತು ಬಂದಿದ್ದು, ಅಖಿಲೇಶ್ ಚಿತ್ರವಿರುವುದು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.

ಜಿಲ್ಲಾ ಪಂಚಾಯತ್ ಇ-ಟೆಂಡರ್ ಮೂಲಕ ಸೂರತ್‌ನ ಕಂಪನಿಯೊಂದರಿಂದ 12,000 ಬ್ಯಾಗ್‌ಗಳನ್ನು ಖರೀದಿಸಿತ್ತು ಎಂದು ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಮಹೇಶ ಪ್ರಜಾಪತಿ ಅವರು ತಿಳಿಸಿದರು. ಈ ಬಗ್ಗೆ ವಿಚಾರಣೆಯನ್ನು ನಡೆಸಲಾಗುವುದು ಮತ್ತು ಈ ಯಡವಟ್ಟಿಗೆ ಕಾರಣ ರಾದವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಭೂಪೇಂದ್ರಸಿಂಹ್ ಚುಡಾಸಮಾ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಅಧಿಕಾರದಲ್ಲಿದ್ದಾಗ ಆ ರಾಜ್ಯದಲ್ಲಿ ವಿತರಿಸಲು ಈ ಬ್ಯಾಗ್‌ಗಳನ್ನು ತಯಾರಿಸಲಾಗಿತ್ತು ಎನ್ನಲಾಗಿದೆ.

 ಬಿಜೆಪಿ ಸರಕಾರವನ್ನು ಕುಟುಕಲು ಈ ಘಟನೆಯನ್ನು ಬಳಸಿಕೊಂಡ ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಷ್ ದೋಷಿ ಅವರು, ಶಿಕ್ಷಕರನ್ನು ಒದಗಿಸುವ ಬದಲು ಸರಕಾರವು ಈ ಶಾಲಾ ಪ್ರವೇಶೋತ್ಸವ ನಾಟಕದ ಮೂಲಕ ಹಿಂದಿನ ಉತ್ತರ ಪ್ರದೇಶ ಸರಕಾರದ ಮರುಬಳಕೆ ಬ್ಯಾಗ್‌ಗಳನ್ನು ವಿತರಿಸುತ್ತಿದೆ. ಸರಕಾರವು ಶಿಕ್ಷಣದ ಬಗ್ಗೆ ಎಷ್ಟೊಂದು ಗಂಭೀರವಾಗಿದೆ ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News