ಹಿರಿಯ ಅಧಿಕಾರಿಗೆ ಹಲ್ಲೆ: ಐಎಎಫ್ ಪೈಲಟ್ ಸೇವೆಯಿಂದ ವಜಾ,ಎರಡು ವರ್ಷ ಜೈಲುಶಿಕ್ಷೆ

Update: 2017-06-13 15:32 GMT

ಹೊಸದಿಲ್ಲಿ,ಜೂ.13: ಹಿರಿಯ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ ಮತ್ತು ಮೆಸ್‌ನಿಂದ ಟಿವಿಯ ರಿಮೋಟ್ ಕಂಟ್ರೋಲ್ ಕಳವು ಮಾಡಿದ್ದ ಆರೋಪಗಳಲ್ಲಿ ತನ್ನ ಪೈಲಟ್‌ನೋರ್ವನನ್ನು ಭಾರತೀಯ ವಾಯುಪಡೆಯು ಸೇವೆಯಿಂದ ವಜಾಗೊಳಿಸಿದೆ. ಆರೋಪಿ ಪೈಲಟ್‌ನನ್ನು ವಿಚಾರಣೆಗೊಳಪಡಿಸಿದ್ದ ಜನರಲ್ ಕೋರ್ಟ್ ಮಾರ್ಷಲ್ (ಜಿಸಿಎಂ)ಆತನಿಗೆ ಎರಡು ವರ್ಷಗಳ ಜೈಲುಶಿಕ್ಷೆಯನ್ನೂ ಘೋಷಿಸಿದೆ.

 ಸದ್ರಿ ಪೈಲಟ್ ಜಿಸಿಎಂ ತನಗೆ ಶಿಕ್ಷೆ ವಿಧಿಸಿರುವುದನ್ನು ಈಗ ದಿಲ್ಲಿಯ ಮಿಲಿಟರಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಶಿಕ್ಷೆಯನ್ನು ಅಮಾನತುಗೊಳಿಸಿರುವ ನ್ಯಾಯಾಲಯವು ಆತನಿಗೆ ಜಾಮೀನು ಮಂಜೂರು ಮಾಡಿದೆ ಎಂದು ಆನಲೈನ್ ಮಾಧ್ಯಮವೊಂದು ವರದಿ ಮಾಡಿದೆ. ಈ ಪೈಲಟ್ ಈಗಾಗಲೇ ವಿಚಾರಣಾ ಅವಧಿಯಲ್ಲಿ ಒಂಭತ್ತು ತಿಂಗಳು ಕಸ್ಟಡಿಯಲ್ಲಿದ್ದ.

 ಪೈಲಟ್ ವಿರುದ್ಧ ಸುಮಾರು 20 ಆರೋಪಗಳಿದ್ದು,ಈ ಪೈಕಿ ಕೆಲವು ರುಜುವಾತಾಗಿವೆ. ಜಿಸಿಎಂ ಆತನಿಗೆ ಏಳು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿತ್ತಾದರೂ ಪಡೆಯು ಅದನ್ನು ಎರಡು ವರ್ಷಗಳಿಗೆ ತಗ್ಗಿಸಿತ್ತು ಎಂದು ಐಎಎಫ್ ಅಧಿಕಾರಿಯೋರ್ವರು ತಿಳಿಸಿದರು.

ವಜಾಗೊಂಡಿರುವ ಪೈಲಟ್ 2013ರವರೆಗೆ ಸಾರಿಗೆ ವಿಮಾನವನ್ನು ನಿರ್ವಹಿಸುತ್ತಿದ್ದ. ಆದರೆ ಅದೇ ವರ್ಷ ಕ್ರೀಡಾಕೂಟದಲ್ಲಿ ಮಂಡಿಗೆ ಗಾಯಗೊಂಡಿದ್ದ ಆತನನ್ನು ಗ್ರೌಂಡ್ ಸರ್ವಿಸ್‌ಗೆ ನಿಯೋಜಿಸಲಾಗಿತ್ತು. ಶೂಟಿಂಗ್ ಚಾಂಪಿಯನ್ ಆಗಿದ್ದ ಈ ಪೈಲಟ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಾಯುಪಡೆಗೆ ಸ್ವರ್ಣಪದಕವನ್ನೂ ಗಳಿಸಿಕೊಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News