ಎಂಬಿಬಿಎಸ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ
ಹೊಸದಿಲ್ಲಿ, ಜೂ. 15: ಪ್ರಶ್ನೆಪತ್ರಿಕೆ ಸೋರಿಕೆ ಆರೋಪವನ್ನು ಹೊಸದಿಲ್ಲಿ ಸರಕಾರದ ಸಮಿತಿ ನಿರಾಕರಿಸಿದ ಬಳಿಕ ಎಐಐಎಂಎಸ್ ಇಂದು ಎಂಬಿಬಿಎಸ್ ಆನ್‌ಲೈನ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.
ಒಟ್ಟು 28,4,737 ಅಭ್ಯರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದರು. ಇವರಲ್ಲಿ 4,905 ಮಂದಿ ಉತ್ತೀರ್ಣರಾಗಿದ್ದು, ಎಐಐಎಂಎಸ್‌ನ ಕೌನ್ಸೆಲಿಂಗ್ ಸೆಷನ್‌ಗೆ ಅರ್ಹತೆ ಪಡೆದಿದ್ದಾರೆ.
ಹೊಸದಿಲ್ಲಿ ಎಐಐಎಂಎಸ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಎಐಐಎಂಎಸ್ 100 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಿದೆ ಎಂದು ಎಐಐಎಂಎಸ್‌ನ ಪರೀಕ್ಷಾ ಮುಖ್ಯಸ್ಥ ಡಾ ಅಶೋಕ್ ಕುಮಾರ್ ಜಾರ್ಯಾಲ್ ತಿಳಿಸಿದ್ದಾರೆ.
ಫಲಿತಾಂಶ ಸಂಸ್ಥೆಯ ಅಧೀಕೃತ ವೆಬ್‌ಸೈಟ್ aiimsexams.org ಹಾಗೂ ಇತರ ಆರು ಎಐಐಎಂಎಸ್‌ನ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.
ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪರೀಕ್ಷೆಯನ್ನು ದೇಶಾದ್ಯಂತದ ವಿವಿಧ ಕೇಂದ್ರಗಳಲ್ಲಿ ಮೇ 28ರಂದು ಆಯೋಜಿಸಲಾಗಿತ್ತು. ಪರೀಕ್ಷೆಗೆ ಸುಮಾರು 2.8 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ ಬಹಿರಂಗಗೊಳಿಸಿದ ಆನಂದ ರೈ, ಎಐಐಎಂಎಸ್ ಎಂಬಿಬಿಎಸ್ ಕೋರ್ಸ್‌ನ ಈ ವರ್ಷದ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ ಎಂದು ಆರೋಪಿಸಿದ್ದರು. ಹಾಗೂ ಇದರ ಬಗ್ಗೆ ತನಿಖೆ ನಡೆಸಲು ಎಐಐಎಂಎಸ್ ಸಮಿತಿ ರೂಪಿಸಬೇಕು ಎಂದು ಆಗ್ರಹಿಸಿದ್ದರು.
ಉತ್ತರಪ್ರದೇಶದ ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ಅಭ್ಯರ್ಥಿಗಳು ಕೆಲವು ಅಧಿಕಾರಿಗಳ ನೆರವು ಪಡೆದು ನಕಲು ಮಾಡಿರುವುದನ್ನು ಹೊರತುಪಡಿಸಿದರೆ, ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ ಎಂದು ಎಐಐಎಂಎಸ್ ಸಮಿತಿ ತನ್ನ ವರದಿಯಲ್ಲಿ ಸ್ಪಷ್ಟನೆ ನೀಡಿತ್ತು. ಈ ಬಗ್ಗೆ ಅದು ಸಿಬಿಐ ತನಿಖೆಗೂ ಅದು ಆಗ್ರಹಿಸಿದೆ.