​ ಹಾಫ್ ಸೆಂಚುರಿ ಭಾರಿಸಿದ 'ಬಾಹುಬಲಿ-2'

Update: 2017-06-16 08:39 GMT

'ಬಾಹುಬಲಿ-2' ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಾವಿರ ಕೋಟಿ ರೂ. ಮೀರಿದ ಆದಾಯ ಗಳಿಸಿ ದಾಖಲೆ ಬರೆದದ್ದು ಎಲ್ಲರಿಗೂ ಗೊತ್ತು. ಪ್ರಭಾಸ್ ಅಭಿನಯದ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರ ದೇಶಾದ್ಯಂತ ಬಿಡುಗಡೆಯಾಗಿ ಇದೀಗ 50 ದಿನ ಪೂರೈಸಿದೆ. ಅಷ್ಟರಲ್ಲೇ 2 ಸಾವಿರ ಕೋಟಿ ರೂಪಾಯಿ ಆದಾಯದ ಗುರಿಯನ್ನು ಬೆನ್ನತ್ತಿ ಸಾಗಿದೆ.

ವರ್ಷದ ಹಿಂದೆ ಬಿಡುಗಡೆಯಾಗಿದ್ದ 'ಬಾಹುಬಲಿ' ನಂತರದ ಸರಣಿಯಾಗಿರುವ 'ಬಾಹುಬಲಿ ದಿ ಕನ್ ಕ್ಲೂಷನ್' ಬಿಗ್ ಬಜೆಟ್ ಚಿತ್ರವಾಗಿತ್ತು. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ತೆರೆಕಂಡಿರುವ ಈ ಚಿತ್ರ ಎಪ್ರಿಲ್ 28ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಇದೀಗ 50 ದಿನಗಳಲ್ಲಿ 1,700 ಕೋಟಿ ರೂಪಾಯಿಗಳ ಆದಾಯ ಗಳಿಸಿರುವ ಈ ಚಿತ್ರ ಇದೀಗ ಚೀನಾದಲ್ಲೂ ತೆರೆ ಕಾಣಲು ಸಜ್ಜಾಗಿದೆ. 

ಈಗಾಗಲೇ 1,700 ಕೋಟಿ ರೂಪಾಯಿ ಗಳಿಸಿರುವ ಈ ಚಿತ್ರ ಚೀನಾದಲ್ಲಿ 500 ಕೋಟಿ ರೂಪಾಯಿಗಳನ್ನಾದರೂ ಗಳಿಸುವ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ. 

ಈ ಮಧ್ಯೆ ಗುರುವಾರ 50 ದಿನಗಳನ್ನು ಪೂರೈಸಿರುವ ಬಗ್ಗೆ ಬಾಹುಬಲಿ ಪಾತ್ರಧಾರಿ ಪ್ರಭಾಸ್ ಸಂತಸ ಹಂಚಿಕೊಂಡಿದ್ದಾರೆ. ಇದು ತಮ್ಮ ಪಾಲಿಗೆ ಅದ್ಭುತ ಕ್ಷಣ ಎಂದು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ 50 ದಿನಗಳ ಯಶೋಗಾಥೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿರುವ ಅವರು ಅಭಿಮಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News