ಕಾಶ್ಮೀರದಲ್ಲಿ ಉಗ್ರರ ದಾಳಿ: ಆರು ಪೊಲೀಸರು, ಇಬ್ಬರು ನಾಗರಿಕರ ಸಾವು, ಇಬ್ಬರು ಉಗ್ರರ ಹತ್ಯೆ

Update: 2017-06-16 17:28 GMT

ಶ್ರೀನಗರ,ಜೂ.16: ಕಾಶ್ಮೀರದಾದ್ಯಂತ ಶುಕ್ರವಾರ ಪ್ರತ್ಯೇಕ ಘಟನೆಗಳಲ್ಲಿ ಆರು ಪೊಲೀಸರು, ಇಬ್ಬರು ಉಗ್ರರು ಮತ್ತು ಇಬ್ಬರು ನಾಗರಿಕರು ಸೇರಿದಂತೆ 10 ಜನರು ಕೊಲ್ಲಲ್ಪಟ್ಟಿದ್ದಾರೆ.

ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಅಚಬಾಲ್ ಪ್ರದೇಶದಲ್ಲಿ ಪೊಲೀಸ್ ತಂಡ ವೊಂದರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಅಲ್ಲಿಯ ಠಾಣಾಧಿಕಾರಿ ಫಿರೋಝ್ ಅಹ್ಮದ್ ದಾರ್ ಸೇರಿದಂತೆ ಆರು ಪೊಲೀಸರು ಬಲಿಯಾಗಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಪೊಲೀಸರ ಮೇಲಿನ ಅತ್ಯಂತ ಭೀಷಣ ದಾಳಿಗಳಲ್ಲೊಂದಾಗಿದ್ದು, ಲಷ್ಕರ್-ಎ-ತೈಬಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದಾಳಿಯಲ್ಲಿ ಇಬ್ಬರು ನಾಗರಿಕರೂ ಗಾಯಗೊಂಡಿದ್ದಾರೆ.

ಅಚಬಾಲ್ ದಾಳಿಯ ಸಮಯದಲ್ಲಿಯೇ ದ.ಕಾಶ್ಮೀರದ ಅರ್ವಾನಿ ಕುಲ್ಗಾಮ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳು ಇಬ್ಬರು ಲಷ್ಕರ್ ಉಗ್ರರನ್ನು ಹತ್ಯೆಗೈದಿವೆ. ಈ ಘಟನೆಯ ಬಳಿಕ ನಡೆದ ಪ್ರತಿಭಟನೆಯಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಸಿಲುಕಿ ಇಬ್ಬರು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ.

ಅಚಬಾಲ್ ಘಟನೆಯ ಕುರಿತಂತೆ ಮಾತನಾಡಿದ ದ.ಕಾಶ್ಮೀರದ ಡಿಐಜಿ ಎಸ್.ಪಿ.ಪಾಣಿ ಅವರು, ಈ ಹೇಡಿತನದ ಕೃತ್ಯದಲ್ಲಿ ನಮ್ಮ ಆರು ಪೊಲೀಸರು ಕೊಲ್ಲಲ್ಪಟ್ಟಿ ದ್ದಾರೆ. ಇದೊಂದು ಯುದ್ಧ ಮತ್ತು ನಾವಿದಕ್ಕೆ ತಾರ್ಕಿಕ ಅಂತ್ಯವನ್ನು ಕಾಣಿಸುತ್ತೇವೆ. ಉತ್ತಮ ಅಧಿಕಾರಿಯೋರ್ವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿದರು. ಅಚಬಾಲ್ ಪ್ರದೇಶವನ್ನು ನಿರ್ಬಂಧಿಸಿರುವ ಪೊಲೀಸರು ಪರಾರಿಯಾಗಿರುವ ಉಗ್ರರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕುಲ್ಗಾಮ್‌ನಲ್ಲಿ ಉಗ್ರರೊಂದಿಗೆ ಗುಂಡಿನ ಕಾಳಗದ ಬಳಿಕ ನಡೆದ ಪ್ರತಿಭಟನೆ ವೇಳೆ ಮೃತಪಟ್ಟ ನಾಗರಿಕರನ್ನು ಮುಹಮ್ಮದ್ ಅಷ್ರಫ್(22) ಮತ್ತು ಅಹ್ಸಾನ್ ಅಹ್ಮದ್(14) ಎಂದು ಗುರುತಿಸಲಾಗಿದೆ. ತಡಸಂಜೆಯವರೆಗೂ ಮುಂದುವರಿದಿದ್ದ ಪ್ರತಿಭಟನೆಯಲ್ಲಿ 20ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ.

ನಾಗರಿಕರ ಹತ್ಯೆಯನ್ನು ವಿರೋಧಿಸಿ ಪ್ರತ್ಯೇಕತಾವಾದಿ ನಾಯಕರು ಜೂ.17ರಂದು ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದಾರೆ. ಭಾರತ ಸರಕಾರವು ಜಮ್ಮು-ಕಾಶ್ಮೀರದ ಜನರ ವಿರುದ್ಧ ಯುದ್ಧವನ್ನು ಸಾರಿದೆ ಎಂದು ಅವರು ಆರೋಪಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಎಂಟು ಗಂಟೆಗೆ ಕುಲ್ಗಾಮ್‌ನ ಅರ್ವಾನಿಯ ಮಲಿಕ್ ಮೊಹಲ್ಲಾ ಪ್ರದೇಶವನ್ನು ನಿರ್ಬಂಧಿಸಿದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಾಗ ಬಚ್ಚಿಟ್ಟುಕೊಂಡಿದ್ದ ಉಗ್ರರೊಡನೆ ಗುಂಡಿನ ಕಾಳಗ ನಡೆದಿತ್ತು. ಈ ವೇಳೆ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಇಬ್ಬರು ಉಗ್ರರ ಪೈಕಿ ಓರ್ವನನ್ನು ಹಿರಿಯ ಲಷ್ಕರ್ ಕಮಾಂಡರ್ ಜುನೈದ್ ಮಾಟೂ ಎಂದು ಗುರುತಿಸಲಾಗಿದೆ. ತನ್ನ ತಲೆಯ ಮೇಲೆ ಹತ್ತು ಲಕ್ಷ ರೂ.ಗಳ ಬಹುಮಾನವನ್ನು ಹೊತ್ತಿದ್ದ ಆತ ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲಿನ ಇತ್ತೀಚಿನ ದಾಳಿಗಳಲ್ಲಿ ಭಾಗಿಯಾಗಿದ್ದ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News