ಒಬಾಮರ ಕ್ಯೂಬಾ ಒಪ್ಪಂದಕ್ಕೆ ಟ್ರಂಪ್ ಖೊಕ್

Update: 2017-06-17 17:09 GMT

ವಾಶಿಂಗ್ಟನ್,ಜೂ.17: ತನ್ನ ಪೂರ್ವಾಧಿಕಾರಿ ಬರಾಕ್ ಒಬಾಮ ಅವರ ಕ್ಯೂಬಾ ಒಪ್ಪಂದವು ಏಕಪಕ್ಷೀಯವಾಗಿದ್ದು, ಅಮೆರಿಕದ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಐತಿಹಾಸಿಕ ಒಡಂಬಡಿಕೆಯನ್ನು ರದ್ದುಪಡಿಸಿರುವುದಾಗಿ ಶನಿವಾರ ಘೋಷಿಸಿದ್ದಾರೆ. ಆ ಮೂಲಕ ಶೀತಲ ಸಮರದ ಸಮಯದಲ್ಲಿ ಬದ್ಧವೈರಿಗಳಾಗಿದ್ದ ಈ ಎರಡು ರಾಷ್ಟ್ರಗಳ ನಡುವೆ ಮತ್ತೆ ತಿಕ್ಕಾಟ ಆರಂಭಗೊಳ್ಳುವ ಸೂಚನೆ ನೀಡಿದ್ದಾರೆ.ಕ್ಯೂಬಾ ಅಧ್ಯಕ್ಷ ರಾವುಲ್ ಕ್ಯಾಸ್ಟ್ರೋ ಅವರ ಮಿಲಿಟರಿ ಏಕಸ್ವಾಮ್ಯದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವು ದಾಗಿಯೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

    ‘‘ಒಬಾಮ ಆಡಳಿತದಲ್ಲಿ ಏರ್ಪಟ್ಟ ಕ್ಯೂಬಾದೊಂದಿಗಿನ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸುತ್ತಿದ್ದೇನೆ. ಚುನಾವಣೆ ವೇಳೆ ನಾನು ಭರವಸೆ ನೀಡಿದ್ದ ನೂತನ ಕ್ಯೂಬಾ ನೀತಿಯನ್ನು ಜಾರಿಗೊಳಿಸುವುದಾಗಿ ಇಂದೇ ಘೋಷಿಸುತ್ತೇನೆ’’ ಎಂದು ಟ್ರಂಪ್ ಹೇಳಿದ್ದಾರೆ.
ಅವರು ಅಮೆರಿಕದ ಮಿಯಾಮಿಯಲ್ಲಿರುವ ‘ಲಿಟಲ್ ಹವಾನಾ’ದಲ್ಲಿ ನೆಲೆಸಿರುವ ಕ್ಯೂಬಾದ ರಾಜಕೀಯ ನಿರಾಶ್ರಿತರನ್ನುದ್ದೇಶಿಸಿ ಮಾತನಾಡುತ್ತಿದ್ದರು.

 ‘‘ನಮ್ಮ ನೀತಿಯು ಕ್ಯೂಬಾ ಹಾಗೂ ಅಮೆರಿಕದ ಜನತೆಗೆ ಹೆಚ್ಚು ಉತ್ತಮವಾದಂತಹ ನೀತಿಯೊಂದನ್ನು ಜಾರಿಗೊಳಿಸಲು ಬಯಸಿದೆ. ಕ್ಯೂಬಾ ಆಡಳಿತದ ಸೇನಾ ಏಕಸ್ವಾಮ್ಯವನ್ನು ಕಾಪಾಡಲು ಹಾಗೂ ಕ್ಯೂಬಾ ನಾಗರಿಕರ ಮೇಲೆ ದೌರ್ಜನ್ಯಗಳನ್ನು ನಡೆಸುವುದಕ್ಕೆ ಅಮೆರಿಕದ ಡಾಲರ್‌ಗಳು ವ್ಯಯವಾಗುವುದು ನಮಗೆ ಬೇಕಿಲ್ಲ’’ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಆಡಳಿತವು ಕ್ಯೂಬಾದ ಜೊತೆಗಿನ ಅಮೆರಿಕದ ಬಾಂಧವ್ಯಕ್ಕೆ ಹೊಸ ನಿರ್ಬಂಧಗಳನ್ನು ವಿಧಿಸಿರುವುದ್ನು ರಾವುಲ್ ಕ್ಯಾಸ್ಟ್ರೋ ಆಡಳಿತವು ಟೀಕಿಸಿತ್ತು. ಆದಾಗ್ಯೂ ಅಮೆರಿಕದ ಜೊತೆ ಗೌರವಯುತ ಮಾತುಕತೆಗಳನ್ನು ನಡೆಸುವ ತನ್ನ ಆಶಯವನ್ನು ಅದು ಪುನರುಚ್ಚರಿಸಿತ್ತು.

    2016ರಲ್ಲಿ ಬರಾಕ್ ಒಬಾಮ ಕ್ಯೂಬಾಗೆ ಐತಿಹಾಸಿಕ ಭೇಟಿ ನೀಡಿದ ಬಳಿಕ ರಾಜಧಾನಿ ಹವಾನದಲ್ಲಿ ಅಮೆರಿಕದ ರಾಯಭಾರಿ ಕಚೇರಿಯು ಪುನಾರಂಭಗೊಂಡಿತ್ತು. ಈ ಎರಡೂ ದೇಶಗಳ ನಡುವೆ ವಾಣಿಜ್ಯ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ವಿಸ್ತರಿಸಲು ಒಬಾಮ ಮುತುವರ್ಜಿ ವಹಿಸಿದ್ದರು. ಆದಾಗ್ಯೂ ಇದೀಗ ಟ್ರಂಪ್ ಅವರು ಕ್ಯೂಬಾ ಕುರಿತ ಒಬಾಮ ನೀತಿಯಿಂದ ಸಂಪೂರ್ಣ ಹಿಂದೆ ಸರಿದಿದ್ದಾರೆ.

ಕ್ಯೂಬಾ ತನ್ನ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುವ ತನಕ ಹಾಗೂ ನಾಗರಿಕ ಸ್ವಾತಂತ್ರಕ್ಕೆ ಮನ್ನಣೆ ನೀಡುವವರೆಗೆ ಆ ದೇಶದ ಮೇಲೆ ಹೇರಿರುವ ನಿರ್ಬಂಧಗಳನ್ನು ರದ್ದುಪಡಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News