ಟೈಗರ್: ದಾರಿ ತಪ್ಪಿದ ಹುಲಿ

Update: 2017-06-18 08:30 GMT

ರೀಮೇಕ್ ಸಿನೆಮಾಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಕರೆಸಿಕೊಂಡ ನಂದ ಕಿಶೋರ್ ‘ಟೈಗರ್’ ಸ್ವಮೇಕ್ ಸಿನೆಮಾ ನಿರ್ದೇಶಿಸಿದ್ದಾರೆ. ಈ ಹಿಂದೆ ಕಾಮಿಡಿ, ಆ್ಯಕ್ಷನ್ ರೀಮೇಕ್‌ಗಳನ್ನು ನಿರ್ದೇಶಿಸಿದ್ದ ಅವರು ಇಲ್ಲಿ ಈ ಎರಡೂ ಮಾದರಿಯನ್ನು ಮಿಕ್ಸ್ ಮಾಡಿದ್ದಾರೆ. ಆದರೆ ಕತೆಯನ್ನೇ ಸರಿಯಾಗಿ ಮಾಡಿಕೊಂಡಿಲ್ಲ. ಯುವನಟ ಪ್ರದೀಪ್‌ಗೆ ಹೊಂದಿಕೆಯಾಗುವಂತೆ ಫೈಟ್ ಮತ್ತು ಹಾಡಿನೊಂದಿಗೆ ಹೀರೋ ಇಂಟ್ರಡಕ್ಷನ್ ಆಗುತ್ತದೆ. ಈ ಹಂತದಲ್ಲಿ ಚಿಕ್ಕಣ್ಣನ ಹಾಸ್ಯ ಚೆನ್ನಾಗಿ ಕೆಲಸಮಾಡಿದೆ. ಒಂದೊಮ್ಮೆ ಚಿಕ್ಕಣ್ಣನ ಹಾಸ್ಯವೂ ಇರದಿದ್ದರೆ ಪ್ರೇಕ್ಷಕರು ಆರಂಭದಲ್ಲೇ ನಿರಾಶರಾಗಬೇಕಿತ್ತು. ನಾಯಕಿಯನ್ನು ಪರಿಚಯಿಸುವ ಸನ್ನಿವೇಶಗಳಲ್ಲಂತೂ ಯಾವುದೇ ಲಾಜಿಕ್ ಇಲ್ಲ. ಇಲ್ಲೆಲ್ಲಾ ಮತ್ತೆ ಚಿತ್ರವನ್ನು ಕೈಹಿಡಿಯುವುದು ಚಿಕ್ಕಣ್ಣ ಮತ್ತು ರಂಗಾಯಣ ರಘು ಅವರ ಹಾಸ್ಯ. ನಟ ಕೆ.ಶಿವರಾಂ ಅವರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಇಲ್ಲಿ ಅವರು ಹೀರೋ ತಂದೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ತಂದೆ-ಮಗನ ಸಂಬಂಧದ ಕತೆಗಳು ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಆ ಸಾಲಿಗೆ ಇದು ಮತ್ತೊಂದು ಸೇರ್ಪಡೆ. ಆದರೆ ಪಾತ್ರಧಾರಿಗಳ ನಟನೆಯಲ್ಲಿ ಆಪ್ತತೆಯೇ ಇಲ್ಲದಿರುವುದರಿಂದ ತಂದೆ-ಮಗನ ಸಂಬಂಧ ಭಾವುಕ ನೆಲೆಯಲ್ಲಿ ವ್ಯಕ್ತವಾಗುವುದಿಲ್ಲ. ಶಿವರಾಂ ಮೊದಲ ಬಾರಿಗೆ ಮಧ್ಯವಯಸ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರು ಪಾತ್ರವನ್ನು ಒಗ್ಗಿಸಿಕೊಳ್ಳಲು ಪ್ರಯಾಸ ಪಟ್ಟಂತಿದೆ. ಇದು ಸಿನೆಮಾಗೆ ಬಹುದೊಡ್ಡ ಹಿನ್ನಡೆ.

ಈ ಹಿಂದೆ ಕಾಮಿಡಿ-ಆ್ಯಕ್ಷನ್ ಸಿನೆಮಾಗಳಲ್ಲಿ ಯಶಸ್ಸು ಕಂಡಿದ್ದ ನಂದಕಿಶೋರ್ ‘ಟೈಗರ್’ಗೆ ಸರಿಯಾದ ಚಿತ್ರಕಥೆ ಮಾಡಿಕೊಂಡಿಲ್ಲ. ತೆಲುಗು ಆ್ಯಕ್ಷನ್ ಸಿನೆಮಾಗಳಂತೆ ಚಿತ್ರಕಥೆ ಮಾಡಿಕೊಳ್ಳಲು ಅವರು ಯತ್ನಿಸಿದ್ದು, ಅದರಲ್ಲಿ ಅವರು ಯಶಸ್ಸು ಕಂಡಿಲ್ಲ. ಅನಗತ್ಯ ಫ್ಲಾಶ್‌ಬ್ಯಾಕ್‌ಗಳು ನೋಡುಗರಿಗೆ ಕಿರಿಕಿರಿ ಎನಿಸುತ್ತವೆ. ಆ್ಯಕ್ಷನ್ ಸನ್ನಿವೇಶಗಳನ್ನು ಭರ್ಜರಿಯಾಗಿ ಸಂಯೋಜಿಸಿದ್ದರೂ, ದಾರಿ ತಪ್ಪಿದ ಕತೆಯಿಂದಾಗಿ ಅವೆಲ್ಲಾ ಗಮನ ಸೆಳೆಯುವುದೇ ಇಲ್ಲ. ಆ್ಯಕ್ಷನ್ ಮತ್ತು ಹಾಡುಗಳಲ್ಲಿ ಮಿಂಚುವ ಹೀರೋ ಪ್ರದೀಪ್ ಭಾವನಾತ್ಮಕ ಸನ್ನಿವೇಶಗಳಲ್ಲಿನ್ನೂ ಪಳಗಬೇಕು. ನಾಯಕಿ ನೈರಾ ಬ್ಯಾನರ್ಜಿ ಹಾಡುಗಳಲ್ಲಷ್ಟೇ ಮುದ್ದಾಗಿ ಕಾಣುತ್ತಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಎರಡು ಹಾಡುಗಳು ಇಂಪಾಗಿವೆ. ಹೀರೋ-ಖಳರ ಅಬ್ಬರದಲ್ಲಿ ಹಾಸ್ಯನಟರು ಚಿತ್ರವನ್ನು ಕೊಂಚ ಸಹನೀಯವಾಗಿಸುತ್ತಾರೆ.

ನಿರ್ದೇಶನ: ನಂದ ಕಿಶೋರ್, ನಿರ್ಮಾಣ: ಚಿಕ್ಕಬೋರಮ್ಮ, ಸಂಗೀತ: ಅರ್ಜುನ್ ಜನ್ಯ, ಛಾಯಾಗ್ರಹಣ : ಸುಧಾಕರ್ ಎಸ್.ರಾಜ್, ತಾರಾಗಣ : ಪ್ರದೀಪ್, ನೈರಾ ಬ್ಯಾನರ್ಜಿ, ಕೆ.ಶಿವರಾಂ, ಓಂಪುರಿ, ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ರಂಗಾಯಣ ರಘು ಮತ್ತಿತರರು.

ರೇಟಿಂಗ್ - **

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News