ಸಿಲಿಕಾನ್ ಸಿಟಿ: ನಗರ ಬದುಕಿನ ತಲ್ಲಣ

Update: 2017-06-17 18:31 GMT

ಮಧ್ಯಮ ವರ್ಗದ ಕುಟುಂಬ, ಆಧುನಿಕ ಬದುಕಿನ ಲೌಕಿಕ ಸುಖಗಳನ್ನು ಅರಸುತ್ತಾ ಕ್ರೈಂಗೆ ಇಳಿಯುವ ಆ ಕುಟುಂಬದ ಯುವಕ, ಇದರಿಂದ ಒಡೆಯುವ ಮನಸ್ಸು, ಮನೆಯವರಲ್ಲಾಗುವ ತಳಮಳಗಳೇ ‘ಸಿನಿಕಾನ್ ಸಿಟಿ’ ಕಥಾವಸ್ತು. ಮೆಟ್ರೋ ನಗರಗಳಲ್ಲಿನ ಸರಗಳ್ಳತನದ ಹಿನ್ನೆಲೆಯಲ್ಲಿ ಕತೆ ಹೆಣೆದಿದ್ದು, ಬಿಗಿಯಾದ ಚಿತ್ರಕಥೆಯಿಂದಾಗಿ ಸಿನೆಮಾ ಚೆನ್ನಾಗಿ ಮೂಡಿಬಂದಿದೆ. ಕಾಲೇಜು ಯುವಕನೊಬ್ಬ ಸುಲಭವಾಗಿ ಹಣ ಸಂಪಾದಿಸಲು ಸರಗಳ್ಳತನಕ್ಕಿಳಿಯುವ ಕತೆ ತಪ್ಪುಸಂದೇಶಕ್ಕೆ ಆಸ್ಪದವಾಗುತ್ತದೆ ಎನ್ನುವ ಸಂದೇಶವೂ ಕಾಡದಿರದು! ಆದರೆ ಈ ದುಷ್ಟತನ ಅಂತಿಮವಾಗಿ ಕುಟುಂಬದ ನಾಶಕ್ಕೆ ಕಾರಣವಾಗುತ್ತದೆ ಎನ್ನುವ ತಾರ್ಕಿಕ ಅಂತ್ಯ ಸಮಾಧಾನ ತರುತ್ತದೆ.

ಕಳೆದ ವರ್ಷ ತೆರೆಕಂಡು ಯಶಸ್ವಿಯಾಗಿದ್ದ ‘ಮೆಟ್ರೋ’ ತಮಿಳು ಸಿನೆಮಾದ ರೀಮೇಕಿದು. ಹೆಚ್ಚು ಕ್ರೈಂ ಸೀನ್‌ಗಳಿವೆ ಎನ್ನುವ ಕಾರಣಕ್ಕೆ ತಮಿಳು ಸಿನೆಮಾ ಬಿಡುಗಡೆಯ ಸಂದರ್ಭದಲ್ಲಿ ಸುದ್ದಿಯಾಗಿತ್ತು. ಕತೆಯನ್ನು ಇಲ್ಲಿಗೆ ಅಳವಡಿಸುವಾಗ ನಿರ್ದೇಶಕ ಮುರಳಿ ಗುರಪ್ಪ ಕ್ರೈಂ ಸೀನ್‌ಗಳನ್ನು ಕಡಿಮೆ ಮಾಡಿದ್ದು, ಕೌಟುಂಬಿಕ ಭಾವನಾತ್ಮಕ ಸನ್ನಿವೇಶಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಉಳಿದಂತೆ ಮೂಲ ತಮಿಳು ಚಿತ್ರದಲ್ಲಿನ ಫ್ಲಾಶ್‌ಬ್ಯಾಕ್ ತಂತ್ರಗಳು ಅದೇ ರೀತಿ ಬಳಕೆಯಾಗಿವೆ. ಶ್ರೀನಿವಾಸ್ ಛಾಯಾಗ್ರಹಣ ಮತ್ತು ಚಿನ್ನ ಅವರ ಹಿನ್ನೆಲೆ ಸಂಗೀತ ಕ್ರೈಂ-ಥ್ರಿಲ್ಲರ್‌ಗೆ ಅಗತ್ಯವಿದ್ದ ಭೂಮಿಕೆ ಒದಗಿಸಿವೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಹಾಡುಗಳು ಕೂಡ ಚಿತ್ರಕ್ಕೆ ಪೂರಕವಾಗಿದ್ದು, ಚಿತ್ರಕಥೆಯ ಓಘಕ್ಕೆ ಯಾವುದೇ ಹಂತದಲ್ಲೂ ತಡೆಯೊಡ್ಡುವುದಿಲ್ಲ.

ನಿರೂಪಣಾ ತಂತ್ರ ವೇಗವಾಗಿರುವುದರಿಂದ ಸಿನೆಮಾ ಎಲ್ಲೂ ನಿಂತ ನೀರಿನಂತೆ ಭಾಸವಾಗುವುದಿಲ್ಲ. ಇಲ್ಲಿ ಪಾತ್ರಗಳು ಮುಖ್ಯವಾಗದೆ ಚಿತ್ರಕಥೆಯೇ ಹೀರೋ ಎನ್ನುವುದು ಹೈಲೈಟ್. ಶ್ರೀನಗರ ಕಿಟ್ಟಿ ಮತ್ತು ಸೂರಜ್ ಗೌಡ ಇಬ್ಬರಿಗೂ ಸಮಾನ ಅವಕಾಶವಿದ್ದು, ಸೂರಜ್ ಗೌಡ ಅವರೇ ಹೆಚ್ಚು ಮಿಂಚುತ್ತಾರೆ. ದುಃಖದ ಸನ್ನಿವೇಶಗಳಲ್ಲಿಯೂ ಕಿಟ್ಟಿ ಅಷ್ಟೇಕೆ ಮೇಕಪ್ ಮಾಡಿಕೊಂಡಿದ್ದಾರೋ? ಇದು ಸನ್ನಿವೇಶಗಳಿಗೆ ಅಸಹಜತೆ ಎನಿಸುತ್ತದೆ. ನಾಯಕಿ ಕಾವ್ಯಾ ಶೆಟ್ಟಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅಶೋಕ್ ಮತ್ತು ತುಳಸಿ ಶಿವಮಣಿ ಪ್ರೇಕ್ಷಕರಿಗೆ ಆಪ್ತರಾಗುತ್ತಾರೆ. ಏಕತಾನತೆಯ ಸಿನೆಮಾಗಳ ಮಧ್ಯೆ ವಿಶಿಷ್ಟ ಪ್ರಯೋಗವಿದು.

ನಿರ್ದೇಶನ: ಮುರಳಿ ಗುರಪ್ಪ, ನಿರ್ಮಾಣ: ಮಂಜುಳಾ ಸೋಮಶೇಖರ್ ಮತ್ತು ರವಿ ಎಂ., ಸಂಗೀತ: ಅನೂಪ್ ಸಿಳೀನ್, ಹಿನ್ನೆಲೆ ಸಂಗೀತ: ಚಿನ್ನ ಎಸ್., ಛಾಯಾಗ್ರಹಣ: ಶ್ರೀನಿವಾಸ್, ತಾರಾಗಣ : ಶ್ರೀನಗರ ಕಿಟ್ಟಿ, ಸೂರಜ್ ಗೌಡ, ಕಾವ್ಯಾ ಶೆಟ್ಟಿ, ಚಿಕ್ಕಣ್ಣ, ಸಾಧು ಕೋಕಿಲ, ಸಿದ್ದು ಮತ್ತಿತರರು.

ರೇಟಿಂಗ್ - ***

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News