​ಗೋವು ಅಧಿಸೂಚನೆ: ಕೇಂದ್ರಕ್ಕೆ ಶಾಕ್ ನೀಡಿದ ಗೋವಾ!

Update: 2017-06-18 04:36 GMT

ಮರ್ಮಗೋವಾ, ಜೂ. 18: ಜಾನುವಾರು ಸಂತೆಗಳಲ್ಲಿ ಕಸಾಯಿಖಾನೆಗೆ ದನಕರುಗಳನ್ನು ಮಾರಾಟ ಮಾಡಬಾರದು ಎಂದು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರಕ್ಕೆ, ಗೋವಾದ ಬಿಜೆಪಿ ಸರ್ಕಾರ ಆಕ್ಷೇಪ ಎತ್ತುವ ಮೂಲಕ ಶಾಕ್ ನೀಡಿದೆ. ಕೇಂದ್ರದ ಈ ನಿರ್ಧಾರದಿಂದ ಆತಿಥ್ಯ ಉದ್ಯಮ ಮತ್ತು ಪೂರಕ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಗೋವಾ ಎಚ್ಚರಿಸಿದೆ.

ಈ ಸಂಬಂಧ ಕೇಂದ್ರಕ್ಕೆ ತುರ್ತಾಗಿ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಯೋಜನಾ ಖಾತೆ ಸಚಿವ ವಿಜಯ್ ಸರ್‌ದೇಸಾಯಿ ಪ್ರಕಟಿಸಿದ್ದಾರೆ. ಬಿಜೆಪಿ ಮೈತ್ರಿಕೂಟದ ಅಂಗಪಕ್ಷವಾದ ಗೋವಾ ಫಾರ್ವರ್ಡ್ ಪಾರ್ಟಿ ಟಿಕೆಟ್‌ನಲ್ಲಿ ಆಯ್ಕೆಯಾಗಿರುವ ಸರ್‌ದೇಸಾಯಿ, ಈ ವಿಷಯವನ್ನು ಈಗಾಗಲೇ ಸಿಎಂ ಮನೋಹರ ಪರಿಕ್ಕರ್ ಜತೆಗೆ ಚರ್ಚಿಸಿದ್ದಾಗಿ ಹೇಳಿದ್ದಾರೆ.

"ಕೇಂದ್ರದ ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ, ಗೋವಾ ಸರ್ಕಾರ ಪ್ರಧಾನಿಗೆ ಪತ್ರ ಬರೆಯಲಿದೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಇದು ರೈತರ ಪಾಲಿಗೆ ಮರಣ ಶಾಸನವಾಗಲಿದ್ದು, ಮಾಂಸ ಮತ್ತು ಚರ್ಮ ಉದ್ಯಮಕ್ಕೆ ಹೊಡೆತ ನೀಡಲಿದೆ. ಜತೆಗೆ ಆತಿಥ್ಯ ಹಾಗೂ ಪೂರಕ ಉದ್ಯಮಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ" ಎಂದು ಅವರು ಅಭಿಪ್ರಾಯಪಟ್ಟರು.

ಗೋವಾದ ಎಲ್ಲ ಖುರೇಷಿಗಳು ಹಾಗೂ ಬೇಪಾರಿಗಳಿಗೆ (ಮಾಂಸ ಮಾರಾಟಗಾರರು) ಕೂಡಾ ಯಾವುದೇ ಅನ್ಯಾಯವಾಗದಂತೆ ಎಚ್ಚರ ವಹಿಸುವುದಾಗಿ ಸರ್‌ದೇಸಾಯಿ ಭರವಸೆ ನೀಡಿದ್ದಾರೆ. ಆಹಾರದ ಹಕ್ಕಿನ ಬಗ್ಗೆ ಸಂವಿಧಾನದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಆದ್ದರಿಂದ ಏನು ತಿನ್ನಬೇಕು ಅಥವಾ ಏನು ತಿನ್ನಬಾರದು ಎಂದು ಯಾರೂ ಸೂಚಿಸುವಂತಿಲ್ಲ. ಅದು ವೈಯಕ್ತಿಕ ಆಯ್ಕೆ. ಈ ವಿಚಾರದಲ್ಲಿ ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News