ಚಲಿಸುತ್ತಿರುವ ರೈಲಿನಲ್ಲಿ ಶಾಲಾ ಬಾಲಕಿಯ ಅತ್ಯಾಚಾರ
ಪಾಟ್ನಾ, ಜೂ. 19: ಬಿಹಾರದ ಲಖಿಸರಾಯಿ ಜಿಲ್ಲೆಯಲ್ಲಿ ಆರು ಮಂದಿ ಆತ್ಯಾಚಾರ ಎಸಗಿ ಚಲಿಸುತ್ತಿರುವ ರೈಲಿನಿಂದ ಎಸೆದ ಪರಿಣಾಮ ಗಂಭೀರ ಗಾಯಗೊಂಡು ಪಾಟ್ನಾದ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಾಲಾ ಬಾಲಕಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಆರೋಪಿಗಳಲ್ಲಿ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖಿಸರಾಯಿಯಲ್ಲಿರುವ ತನ್ನ ಮನೆಯಿಂದ ಗೆಳತಿಯನ್ನು ಭೇಟಿಯಾಗಲು ತೆರಳಿದ 10ನೇ ತರಗತಿಯ ಈ ಬಾಲಕಿಯನ್ನು ಗುಂಪೊಂದು ಅಪಹರಿಸಿ ರೈಲಿನಲ್ಲಿ ಅತ್ಯಾಚಾರ ಎಸಗಿ ಕೆಳಗೆ ತಳ್ಳಿತು. ಮರು ದಿನ ಆಕೆ ರೈಲು ಹಳಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅನಂತರ ಆಕೆಯನ್ನು ಪಾಟ್ನಾ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು. ಆಕೆಯನ್ನು 6 ಗಂಟೆ ತಡವಾಗಿ ದಾಖಲಿಸಿಕೊಳ್ಳಲಾಯಿತು ಎಂದು ಬಾಲಕಿಯ ಕುಟುಂಬಿಕರು ತಿಳಿಸಿದ್ದಾರೆ. ದಾಖಲಿಸಲು ವಿಳಂಬವಾಗಲು ಬೆಡ್‌ನ ಕೊರತೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.