ರಾಮ್‌ನಾಥ್ ಕೋವಿಂದ್ ಮೀಸಲಾತಿ ವಿರೋಧಿಯೇ ?
ಹೊಸದಿಲ್ಲಿ, ಜೂ. 20: ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ 2010ರಲ್ಲಿ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮ ನೇಶನ್ (ದೇಶ) ಗೆ ಅನ್ಯ ಎಂದು ಹೇಳಿದರೇ ? ಅಥವಾ ಅವರು ತಪ್ಪಾಗಿ ಉಲ್ಲೇಖಿಸಿದರೆ ? ಅದು ನೋಶನ್ (ಕಲ್ಪನೆ) ಎಂದಾಗಬೇಕಿತ್ತೇ? ಅಂದರೆ ಇಸ್ಲಾಂ, ಕ್ರಿಶ್ಚಿಯನ್ ಮೀಸಲಾತಿಗೆ ಅನ್ಯ ಎಂದಾಗಬೇಕಿತ್ತೇ ? ಬಿಜೆಪಿ ಸೋಮವಾರ ರಾಷ್ಟ್ರಪತಿ ಸ್ಥಾನಕ್ಕೆ ರಾಮ್‌ನಾಥ್ ಕೋವಿಂದ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ಮೀಸಲಾತಿ ಕುರಿತು ಕೋವಿಂದನ್ ವ್ಯಕ್ತಪಡಿಸಿದ ನಿಲುವಿನ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್ 2010 ಮಾರ್ಚ್‌ಲ್ಲಿ ಪ್ರಕಟಿಸಿದ ವರದಿ ಬಹಿರಂಗಿದ್ದು, ಈಗ ನೇಶನ್ (ದೇಶ) ಹಾಗೂ ನೋಶನ್ (ಕಲ್ಪನೆ)ಪದಗಳು ಟ್ವಟ್ಟರ್‌ನಲ್ಲಿ ಹರಿದಾಡುತ್ತಿವೆ. ಭಾರತದಲ್ಲಿರುವ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗದಲ್ಲಿ ಶೇ. 15 ಮೀಸಲಾತಿ ಶಿಫಾರಸು ಮಾಡುವ ರಂಗನಾಥ್ ಮಿಶ್ರಾ ಆಯೋಗದ ವರದಿ ಕುರಿತು ಬಿಜೆಪಿಯ ಅಂದಿನ ವಕ್ತಾರ ರಾಮ್‌ನಾಥ್ ಕೋವಿಂದ್ 2010 ಮಾರ್ಚ್ 26ರಂದು ಹೇಳಿಕೆ ನೀಡಿದ್ದರು. ಮಿಶ್ರಾ ವರದಿ ಸರಕಾರಿ ಉದ್ಯೋಗಗಳಲ್ಲಿ ಶೇ. 10 ಮುಸ್ಲಿಮರಿಗೆ, ಶೇ. 5 ಇತರ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು ಹಾಗೂ ಎಲ್ಲ ಧರ್ಮಗಳಲ್ಲಿರುವ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡುವುದಕ್ಕೆ ಒಲವು ವ್ಯಕ್ತಪಡಿಸಿತ್ತು.
ಇಲ್ಲ, ಇದು ಸಾಧ್ಯವಿಲ್ಲ. ಮುಸ್ಲಿಮರು ಹಾಗೂ ಕ್ರಿಶ್ಚಿಯನರನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು ಅಸಾಂವಿಧಾನಿಕ ಎಂದು ದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಮ್‌ನಾಥ್ ಕೋವಿಂದ್ ಹೇಳಿರುವುದಾಗಿ ಐಎಎನ್‌ಎಸ್ ಹೇಳಿತ್ತು. ಇದೇ ವರ್ಗದಲ್ಲಿ ಸಿಕ್ಖ್ ದಲಿತರಿಗೆ ಮೀಸಲಾತಿ ನೀಡಿದರೆ ಹೇಗೆ ಎಂದು ಅವರನ್ನು ಪ್ರಶ್ನಿಸಲಾಗಿತ್ತು. ಆಗ ಅವರು, ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮ ದೇಶಕ್ಕೆ ಅನ್ಯ ಎಂದು ಹೇಳಿರುವುದಾಗಿ ಐಎಎನ್‌ಎಸ್ ವರದಿ ಮಾಡಿತ್ತು. ಆದರೆ, ಬುಧವಾರ ಬಿಜೆಪಿ ದಲಿತ ಮೋರ್ಚಾದ ಮಾಜಿ ಅಧ್ಯಕ್ಷ ಹಾಗೂ ದಲಿತ ನಾಯಕ ರಾಮ್‌ನಾಥ್ ಕೋವಿಂದ್ ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗುತ್ತಿದೆ ಎಂದು ಕೆಲವು ಟ್ವಿಟ್ಟರ್ ಬಳಕೆದಾರರು ಸಮಜಾಯಿಷಿ ನೀಡಿದ್ದಾರೆ.