ಟೆಲಿಕಾಂ ವಲಯದಲ್ಲಿ 17,000 ಕೋ. ರೂ ಆದಾಯ ಕುಸಿತ ನಿರೀಕ್ಷೆ
ಹೊಸದಿಲ್ಲಿ, ಜೂ. 20: ಟೆಲಿಕಾಂ ಸಂಸ್ಥೆಗಳ ಗಂಭೀರ ಹಣಕಾಸಿನ ಒತ್ತಡ ಹಾಗೂ ಗಳಿಕೆಯಲ್ಲಿನ ತೀವ್ರ ಇಳಿಕೆಯಿಂದ ಟೆಲಿಕಾಂ ವಲಯದಿಂದ ಗಳಿಸಬೇಕಾದ ಆದಾಯ ಪ್ರಸಕ್ತ ವಿತ್ತ ವರ್ಷದಲ್ಲಿ ಶೇ. 38ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ.
ಟೆಲಿಕಾಂ ಕಂಪೆನಿಗಳ ಬಾಕಿ ಸಾಲದ ಮೊತ್ತ 7.29 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿರುವ ಬಗ್ಗೆ ಕೇಂದ್ರ ಸರಕಾರ ಆತಂಕಗೊಂಡಿದೆ. ತನ್ನ ತೆರಿಗೆಯೇತರ ಆದಾಯದ ಗುರಿಯನ್ನು ಈ ಹಿಂದೆ ಅಂದಾಜಿಸಲಾದ 47,304 ಕೋಟಿ ರೂಪಾಯಿಯಿಂದ 29,524 ಕೋಟಿ ರೂಪಾಯಿಗೆ ಇಳಿಕೆ ಮಾಡಬೇಕು ಎಂದು ಟೆಲಿಕಾಂ ಇಲಾಖೆ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಟೆಲಿಕಾಂ ಕಂಪೆನಿಗಳ ನಡುವಿನ ಪೈಪೋಟಿ ತೀವ್ರತೆಗೆ ತಲುಪಿದ್ದು, ಇದು ಹೀಗೇ ಮುಂದುವರಿದರೆ ಟೆಲಿಕಾಂ ಕಂಪೆನಿಗಳ ಸಾಲ ಮರುಪಾವತಿಸುವ ಬದ್ಧತೆ ಹಾಗೂ ಇತರ ಬಾಧ್ಯತೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸರಕಾರ, ಹಾಗೂ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈ ಬೆಳವಣಿಗೆ ಉಂಟಾಗಿದೆ.
ಟೆಲಿಕಾಂ ಇಲಾಖೆ (ಹಣಕಾಸು)ನ ಸದಸ್ಯೆ ಅನುರಾಧಾ ಮಿತ್ರ ಹಣಕಾಸು ವ್ಯವಹಾರಗಳ ಇಲಾಖೆ (ಡಿಇಎ) ಕಾರ್ಯದರ್ಶಿಗೆ ಪತ್ರ ಬರೆದು ಟೆಲಿಕಾಂ ಕಂಪೆನಿಗಳು ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿರುವುದರಿಂದ ಪ್ರಸಕ್ತ ವಿತ್ತ ವರ್ಷದಲ್ಲಿ ಟೆಲಿಕಾಂ ಇಲಾಖೆಗೆ ನೀಡಲಾದ ತೆರಿಗೆಯೇತರ ಆದಾಯ ಗುರಿಯನ್ನು ಇಳಿಕೆ ಮಾಡಿ ಪರಿಷ್ಕರಿಸುವಂತೆ ವಿನಂತಿಸಿದ್ದಾರೆ.